ಎಂ.ನಾರಾಯಣ
ತಿ.ನರಸೀಪುರ: ನಾಲೆಗಳಿಗೆ ನೀರು ಹರಿಸದ ಕಾರಣ ಒಣಗುತ್ತಿರುವ ದ್ವಿದಳ ಧಾನ್ಯ ಬೆಳೆಗಳು
ತಿ.ನರಸೀಪುರ: ತಾಲ್ಲೂಕಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿ ಮಳೆಯಾಶ್ರಿತ ಬೆಳೆಗಳು ಹೂ ಬಿಡದೆ ಒಣಗುತ್ತಿವೆ. ಇದರಿಂದ ಹಲವು ರೈತರು ಬಿತ್ತನೆ ಮಾಡಿದರೆ ಮತ್ತೆ ಕೆಲವರು ಬಿತ್ತನೆ ಮಾಡೇ ಇಲ್ಲ.
ಮಳೆ ಕೊರತೆಯಿಂದಾಗಿ ಕಬಿನಿ ಹಾಗೂ ಕಾವೇರಿ ಜಲಾಶಯಗಳು ಭರ್ತಿಯಾಗದೆ ರೈತರು ಬೆಳೆ ಬೆಳೆಯಲು ನೀರು ಇಲ್ಲದಂತಾಗಿದೆ. ಕಬಿನಿ ಜಲಾಶಯದ ನೀರನ್ನೇ ಈ ಭಾಗದ ಬಹುತೇಕ ರೈತರು ಅವಲಂಬಿಸಿದ್ದಾರೆ. ಈ ಬಾರಿ ಜಲಾಶಯ ಭರ್ತಿಯಾದರೂ ಈ ಭಾಗದ ರೈತರ ನಾಲೆಗಳಿಗೆ ನೀರು ಹರಿಸದಿರುವುದು ರೈತರ ಆಕ್ರೋಶಕ್ಕೆ ಗುರಿಯಾಗಿದೆ. ಸರ್ಕಾರ ಕೃಷಿ ಇಲಾಖೆಗಳಿಗೆ ಸೂಚನೆ ನೀಡಿ ಭತ್ತ ಬೆಳೆಯಲು ನೀರು ಕೊಡಲಾಗುವುದಿಲ್ಲ. ಕೆರೆ ಕಟ್ಟೆ ಹಾಗೂ ಜಾನುವಾರುಗಳಿಗೆ ಮಾತ್ರ ನೀರು ಹರಿಸಲಾಗುವುದು ಎಂದು ತಿಳಿಸಿದೆ.
ಬಿತ್ತನೆ ಭತ್ತ ವಿತರಣೆ ಮಾಡಲಿಲ್ಲ, ಅದರ ಬದಲು ದ್ವಿದಳ ಧಾನ್ಯಗಳಾದ ಹೆಸರು, ಅಲಸಂದೆ, ಹುರುಳಿ, ಮೆಕ್ಕೆಜೋಳ, ಸೂರ್ಯಕಾಂತಿ, ತೊಗರಿಬೇಳೆ ಬಿತ್ತನೆ ಬೀಜಗಳನ್ನು ಮಾತ್ರ ವಿತರಣೆ ಮಾಡಲಾಗಿದೆ. ಪಂಪ್‌ಸೆಟ್ ಹೊಂದಿರುವ ಹಾಗೂ ನದಿಗಳ ತಟದಲ್ಲಿರುವ ಜಮೀನಿನ ರೈತರು ಗೊಬ್ಬರದ ಅಂಗಡಿಗಳಲ್ಲಿ ದೊರೆಯುವ ಬಿತ್ತನೆ ಭತ್ತಗಳನ್ನು ಪಡೆದು ನಾಟಿ ಮಾಡಿದ್ದಾರೆ.
ಈಗಾಗಲೇ ಮಳೆ ಆಶ್ರಿತ ಪ್ರದೇಶದ ರೈತರು ದ್ವಿದಳ ಧಾನ್ಯ ಬೆಳೆಗಳನ್ನು ಬಿತ್ತನೆ ಮಾಡಿದ್ದು, ಅವುಗಳು ಬೆಳೆದು ಹೂ ಬಿಡುವ ಸಂದರ್ಭವಾಗಿದ್ದರೂ ಮಳೆ ಕೊರತೆಯಿಂದ ಇನ್ನೂ ಹೂ ಬಿಡದಿರುವುದು ರೈತರನ್ನು ಚಿಂತೆಗೀಡು ಮಾಡಿದೆ. ಮುಂಗಾರು ವಾಡಿಕೆ ಮಳೆ ೩೧೫.೧ ಮಿ.ಮೀ. ಆಗಬೇಕಿತ್ತು. ಆದರೆ ಈ ಬಾರಿ ಕಡಿಮೆ ಪ್ರಮಾಣದ ೧೪೪ ಮಿ.ಮೀ. ಮಳೆಯಾಗಿದ್ದು, ಶೇಕಡಾ ೪೬ರಷ್ಟು ಮಳೆ ಕೊರತೆಯಾಗಿದೆ.
ತಾಲ್ಲೂಕಿನಲ್ಲಿ ಒಟ್ಟು ೩೪,೬೧೬ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬೇಕಾಗಿತ್ತು. ಆದರೆ, ೪,೭೯೪ ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆಯಾಗಿದೆ. ಕೃಷಿ ಇಲಾಖೆಯಿಂದ ಬೆಳೆ ವಿಮೆ ಮಾಡಿಸಲಾಗಿದೆ. ಈ ಬಾರಿ ಮಳೆ ಇಲ್ಲದೆ ಬರ ಪರಿಸ್ಥಿತಿ ನಿರ್ಮಾಣ ಗೊಂಡಿರುವುದರಿಂದ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ರೈತರು ಬರ ಪರಿಹಾರಕ್ಕೆ ಈಗ ನೋಂದಣಿ ಮಾಡಿದರೆ ೮-೧೦ ತಿಂಗಳ ನಂತರ ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ.
ತಾಲ್ಲೂಕಿನಲ್ಲಿ ೨೩,೦೦೦ ಹೆಕ್ಟೇರ್‌ನಲ್ಲಿ ಭತ್ತದ ಬೆಳೆ ಬೆಳೆಯಬೇಕಾಗಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ೯,೦೦೦ ಹೆಕ್ಟೇರ್ ಭೂಪ್ರದೇಶದಲ್ಲಿ ಮಾತ್ರ ನಾಟಿ ಮಾಡಲಾಗಿದೆ ಎಂದು ಕೃಷಿ ಅಧಿಕಾರಿಗಳು ‘ಆಂದೋಲನ’ಕ್ಕೆ ತಿಳಿಸಿದ್ದಾರೆ.
” ತಾಲ್ಲೂಕಿನ ೩೬ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಯಾವುದೇ ತೊಂದರೆ ಆಗಿಲ್ಲ. ಕೆಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನದಿಯಿಂದ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಮಳೆ ಕೊರತೆಯಾದರೂ, ಅಲ್ಪ ಸ್ವಲ್ಪ ಮಳೆ ಆಗುತ್ತಿರುವುದರಿಂದ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ.”
ಡಾ.ಕೆ.ರಂಗಸ್ವಾಮಿ, ಇಒ, ತಾಪಂ
” ನಮ್ಮ ತಾಲ್ಲೂಕನ್ನು ಜಿಲ್ಲೆಯಲ್ಲಿ ಅತ್ಯಂತ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಬಗ್ಗೆ ಪರಿಹಾರಕ್ಕಾಗಿ ಅಂದಾಜು ವೆಚ್ಚವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಅಂತಿಮವಾಗಿ ಜಿಲ್ಲಾಧಿಕಾರಿಗಳು ನಮ್ಮ ತಾಲ್ಲೂಕಿಗೆ ಎಷ್ಟು ಮೊತ್ತ ನಿಗದಿಪಡಿಸಲಾಗಿದೆ ಎಂಬುದನ್ನು ಪ್ರಕಟಿಸಲಿದ್ದಾರೆ.”
ಸುರೇಶಾಚಾರ್, ತಹಸಿಲ್ದಾರ್, ತಿ.ನರಸೀಪುರ
” ತಾಲ್ಲೂಕಿನಲ್ಲಿ ಅಂತರ್ಜಲ ಸಂಪೂರ್ಣ ಕುಸಿತಗೊಂಡಿಲ್ಲ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಇತ್ತೀಚೆಗೆ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಹೀಗಾಗಿ ಅಂತರ್ಜಲಕ್ಕೆ ಯಾವುದೇ ಸಮಸ್ಯೆ ಇಲ್ಲ. ಜಾನುವಾರುಗಳಿಗೆ ಒಳ ಮೇವು -ಹಸಿಮೇವು ಇದೆ. ಆದರೆ ಬೆಳೆದ ದ್ವಿದಳ ಧಾನ್ಯ ಬೆಳೆಗಳು ಕೆಲವು ಒಣಗಿವೆ. ಕೆಲವು ಹೂ ಬಿಡದೆ ಗಿಡವಾಗಿ ಬೆಳೆದು ನಿಂತಿವೆ. ದ್ವಿದಳ ಧಾನ್ಯ ಮಾತ್ರ ರೈತರ ಕೈ ಸೇರಲಿಲ್ಲ. ಇದರಿಂದ ರೈತರ ಆದಾಯಕ್ಕೆ ಧಕ್ಕೆ ಉಂಟಾಗಿದೆ. ಭತ್ತದ ಬೆಳೆಗೆ ಈ ಬಾರಿ ನಾಲೆಗೆ ನೀರು ಬಿಡುವುದಿಲ್ಲ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಬಿತ್ತನೆ ಭತ್ತ ವಿತರಿಸಿಲ್ಲ. ಬದಲಾಗಿ ಜೋಳ, ಹುರುಳಿ, ಅಲಸಂದೆ, ತೊಗರಿ ಮುಂತಾದ ದ್ವಿದಳ ಧಾನ್ಯಗಳ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ. ಇನ್ನೂ ಸಾಕಷ್ಟು ದಾಸ್ತಾನು ಇದೆ.”
ಎಂ.ರೂಪ, ಸಹಾಯಕ ಕೃಷಿ ನಿರ್ದೇಶಕರು




