ಮಂಜು ಕೋಟೆ
ಕೋಟೆ ಟಿಎಪಿಸಿಎಂಎಸ್‌ನ ಆಡಳಿತ ಮಂಡಳಿ ಭವಿಷ್ಯದ ಕುರಿತು ಮೂಡಿದ ಕುತೂಹಲ
ಎಚ್.ಡಿ.ಕೋಟೆ: ರಾಜಕೀಯ ಕಾರ್ಯತಂತ್ರಗಳಿಂದ ಕೂಡಿ ಕುತೂಹಲ ಮೂಡಿಸಿದ್ದ ತಾಲ್ಲೂಕಿನ ಟಿಎಪಿಸಿಎಂಎಸ್‌ನ ಎಂಟು ಮಂದಿ ನಿರ್ದೇಶಕರು ತಮ್ಮ ಸ್ಥಾನಗಳಿಗೆ ಸಲ್ಲಿಸಿದ್ದ ರಾಜೀನಾಮೆ ಅಂಗೀಕಾರವಾಗಿದೆ.
೧೫ ದಿನಗಳ ಹಿಂದೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳ ನಡುವೆ ನಡೆದ ಕೆಲವೊಂದು ಘಟನೆಗಳಿಂದ ಅಧಿಕಾರ ವಂಚಿತವಾದ ಜಾ.ದಳ ಮತ್ತು ಬಿಜೆಪಿ ಮೈತ್ರಿಯ ಪ್ರಭಾವಿ ಮುಖಂಡರಾದ ಹಾಗೂ ನಿರ್ದೇಶಕರಾದ ಹಾಗೂ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮೊತ್ತ ಬಸವರಾಜಪ್ಪ ಹಾಗೂ ಉಪಾಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ನಿರ್ದೇಶಕರಾದ ಅರವಿಂದ್, ನೂರ್ ಮಹಮ್ಮದ್, ಶುಭಮಂಗಳ, ಭುಜಂಗ ನಾಯಕ, ಶಿವಮಲ್ಲಪ್ಪ, ವೈಲಿ ಮಾದಯ್ಯ ಅವರು ತಮ್ಮ ಸ್ಥಾನಗಳಿಗೆ ಚುನಾವಣೆ ದಿನದಂದೇ ಸಂಘದ ಸಿಇಒ ನಿಂಗರಾಜು ಅವರಿಗೆ ರಾಜೀನಾಮೆ ಸಲ್ಲಿಸಿದ್ದರು.
ನಿಯಮದ ಪ್ರಕಾರ ರಾಜೀನಾಮೆ ವಾಪಸ್ ಪಡೆಯಲು ಮತ್ತು ಅಂಗೀಕಾರವಾಗಲು ೧೫ ದಿನಗಳ ಕಾಲಾವಕಾಶವಿದ್ದು, ಶುಕ್ರವಾರ ಅಂತಿಮ ದಿನವಾಗಿತ್ತು. ಮೈತ್ರಿಯ ೮ ನಿರ್ದೇಶಕರ ಪೈಕಿ ಯಾರೊಬ್ಬರೂ ನಾಮಪತ್ರ ವಾಪಸ್ ಪಡೆಯದೆ ತಮಿಳುನಾಡು ಭಾಗದಲ್ಲಿ ಪ್ರವಾಸದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ಕಾಂಗ್ರೆಸ್ ಪಕ್ಷದ ಬೆಂಬಲಿತರಾದ ಸಂಘದ ಅಧ್ಯಕ್ಷರಾದ ಹಿರೇಹಳ್ಳಿ ಸೋಮೇಶ್ ಮತ್ತು ಉಪಾಧ್ಯಕ್ಷರಾದ ಶಿವನಂಜಮ್ಮ, ಕಾಂಗ್ರೆಸ್ ಪಕ್ಷದ ಏಳು ಜನ ನಿರ್ದೇಶಕರು, ಅಧಿಕಾರಿ ವರ್ಗದವರು, ಸದಸ್ಯರುಗಳು ಸೇರಿ ಸೋಮೇಶ್ ಅವರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆಯನ್ನೂ ಅದ್ಧೂರಿಯಾಗಿ ನಡೆಸಿದ್ದಾರೆ.
ಸಂಘದ ಆಡಳಿತ ಮಂಡಳಿಯಲ್ಲಿ ಒಟ್ಟು ೧೫ ಜನ ನಿರ್ದೇಶಕರಿದ್ದು, ಅವರಲ್ಲಿ ಮೈತ್ರಿಯ ಎಂಟು ಜನ ನಿರ್ದೇಶಕರ ರಾಜೀನಾಮೆ ಅಂಗೀಕಾರವಾಗಿದೆ. ಕಾಂಗ್ರೆಸ್ ಪಕ್ಷದ ಏಳು ಜನ ನಿರ್ದೇಶಕರು ಉಳಿದುಕೊಂಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ನೂತನ ಆಡಳಿತ ಮಂಡಳಿಯ ಭವಿಷ್ಯ ಏನಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಜತೆಗೆ ಮೈತ್ರಿ ಪಕ್ಷದ ೮ ಜನ ನಿರ್ದೇಶಕರ ಪೈಕಿ ಇಬ್ಬರ ನಿರ್ದೇಶಕ ಸ್ಥಾನಗಳನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟಿರುವ ಕಾರಣ ಎಂಟು ಜನರ ನಿರ್ದೇಶಕರ ಸ್ಥಾನಗಳ ರಾಜೀನಾಮೆ ಅಂಗೀಕಾರ ಮಾಡುವಲ್ಲಿ ಅಧಿಕಾರಿಗಳು ಮುಂದಾಗುತ್ತಾರೋ ಅಥವಾ ಇಬ್ಬರನ್ನುಹೊರತುಪಡಿಸಿ ಉಳಿದ ಆರು ಜನರ ರಾಜೀನಾಮೆ ಪತ್ರವನ್ನು ಅಂಗೀಕಾರ ಮಾಡುತ್ತಾರೋ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
” ಎಂಟು ಜನ ನಿರ್ದೇಶಕರು ನೀಡಿದ ರಾಜೀನಾಮೆ ಪತ್ರವನ್ನು ಯಾರೂ ವಾಪಸ್ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಈ ಕುರಿತ ಸಮಗ್ರ ವರದಿಯನ್ನು ಮೇಲಧಿಕಾರಿಗಳಿಗೆ ನೀಡಲಾಗುವುದು.ಅವರು ತೆಗೆದುಕೊಳ್ಳುವ ಕ್ರಮದ ಬಗ್ಗೆಸಂಬಂಧಪಟ್ಟ ನಿರ್ದೇಶಕರುಗಳಿಗೆ ತಿಳಿಸಲಾಗುವುದು.”
-ನಿಂಗರಾಜು, ಸಿಇಒ, ಟಿಎಪಿಸಿಎಂಎಸ್





