Mysore
26
overcast clouds

Social Media

ಭಾನುವಾರ, 21 ಜೂನ್ 2026
Light
Dark

ಚಾ.ನಗರ | ಸಿದ್ದಲಿಂಗಪುರ ಬಳಿ ಹುಲಿ ದಾಳಿ ; 4 ಮೇಕೆಗಳು ಸಾವು

ರೈತರು, ದನಗಾಹಿಗಳಲ್ಲಿ ಆತಂಕ

ಬೇಗ ಹುಲಿ ಸೆರೆ ಹಿಡಿಯಲು ಆಗ್ರಹ

ಚಾಮರಾಜನಗರ : ತಾಲ್ಲೂಕಿನ ಸಿದ್ದಲಿಂಗಪುರದ ಸಮೀಪ ಭಾನುವಾರ ಮಧ್ಯಾಹ್ನ ಹುಲಿ ದಾಳಿಗೆ 2 ಕುರಿಗಳು ಮತ್ತು 2 ಮೇಕೆಗಳು ಮೃತಪಟ್ಟಿವೆ.

ಗ್ರಾಮದ ಶಿವಣ್ಣ ಶೆಟ್ಟಿ ಎಂಬುವರಿಗೆ ಸೇರಿದ 2 ಕುರಿಗಳು, 2 ಮೇಕೆಗಳು ಹುಲಿ ದಾಳಿಗೆ ಬಲಿಯಾಗಿವೆ. ಎಂದಿನಂತೆ ಶಿವಣ್ಣ ಶೆಟ್ಟಿ ಮತ್ತು ಅವರ ಮಗ ಶೇಷಣ್ಣ ಭಾನುವಾರ ಬೆಳಿಗ್ಗೆ ತಮ್ಮ 55 ಕುರಿ ಹಾಗೂ ಮೇಕೆಗಳನ್ನು ತಮ್ಮದೆ ಜಮೀನಿಗೆ ಮೇಯಿಸಲು ಕರೆತಂದಿದ್ದರು.

ಭಾನುವಾರ ಮಧ್ಯಾಹ್ನ 2.30 ಗಂಟೆ ಸಮಯದಲ್ಲಿ ಸಮೀಪವೇ ಇರುವ ಕರಿಕಲ್ಲು ಕ್ವಾರಿಯಿಂದ ಹುಲಿಯೊಂದು ದಾಳಿಯಿಟ್ಟು 2 ಮೇಕೆ ಹಾಗೂ 2 ಕುರಿಗಳ ಮೇಲೆ ಎರಗಿ ಅವುಗಳ ಕುತ್ತಿಗೆಗಳನ್ನು ಕಚ್ಚಿ ರಕ್ತ ಹೀರಿ ಸಾಯಿಸಿದೆ.

ಹುಲಿಯನ್ನು ಕಂಡ ಶೇಷಣ್ಣ ಕೂಗಾಡಿದ್ದಾರೆ. ಕೂಡಲೇ ಹುಲಿ ಮೇಕೆಗಳನ್ನು ಬಿಟ್ಟು ಕಲ್ಲು ಕ್ವಾರಿಯತ್ತ ಪರಾರಿಯಾಗಿದೆ. ಹುಲಿ ದಾಳಿಯಿಂದ 4 ಮೇಕೆಗಳು ಮೃತಪಟ್ಟಿದ್ದು 60 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ.

ಇತ್ತೀಚೆಗೆ ಶಿವಣ್ಣ ಶೆಟ್ಟಿ ಅವರಿಗೆ ಸೇರಿದ ಮೇಕೆಯೊಂದರ ಮೇಲೆ ಚಿರತೆ ದಾಳಿ ನಡೆಸಿ ಸಾಯಿಸಿತ್ತು. ಒಂದು ವಾರದ ಹಿಂದೆ ಬಡಗಲಪುರ ಸಮೀಪದ ಗುಡ್ಡದ ಬಳಿ ಹುಲಿ ಮೇಯುತ್ತಿದ್ದ 2 ಮೇಕೆಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. vಈ ಹಿನ್ನೆಲೆಯಲ್ಲಿ ಹುಲಿ ದಾಳಿ ನಡೆದಿರುವ 150 ಮೀಟರ್ ಅಂತರದಲ್ಲಿ ಅರಣ್ಯ ಇಲಾಖೆಯಿಂದ ಹಿಂದೆಯೇ ಬೋನ್ ಇಡಲಾಗಿದೆ. ಆದರೆ, ಚಿರತೆ, ಹುಲಿಯಾಗಲಿ ಸೆರೆಯಾಗಿಲ್ಲ. ಇದರಿಂದ ಸಿದ್ದಲಿಂಗಪುರ ಹಾಗೂ ಸುತ್ತಲಿನ ಗ್ರಾಮಗಳ ಜನರು ಆತಂಕಗೊಂಡಿದ್ದಾರೆ. ಹುಲಿ ದಾಳಿ ವಿಷಯ ತಿಳಿದ ಚಾಮರಾಜನಗರ ಪ್ರಾದೇಶಿಕ ವಲಯಾರಣ್ಯದ ಅರಣ್ಯ ರಕ್ಷಕರಾದ ಕೃಷ್ಣಮೂರ್ತಿ, ಶೇಷಾದ್ರಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ಈ ಭಾಗದಲ್ಲಿ ಎಣ್ಣೆ ಹೊಳೆ ಮಹದೇಶ್ವರ ಬೆಟ್ಟ ಗುಡ್ಡಗಳಿದ್ದು, ಚಾಮರಾಜನಗರ ಪ್ರಾದೇಶಿಕ ವಲಯಾರಣ್ಯಕ್ಕೆ ಸೇರಿದೆ. ಇದಲ್ಲದೆ ಅಮಚವಾಡಿ, ಬಡಗಲಪುರ, ಸಿದ್ದಲಿಂಗಪುರ ಸುತ್ತಮುತ್ತ ಕರಿಕಲ್ಲು ಕ್ವಾರಿಗಳಿದ್ದು, ಹುಲಿ ಮತ್ತು ಚಿರತೆಗಳು ವಾಸವಾಗಿದ್ದು ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಹುಲಿ, ಚಿರತೆ ಹಾವಳಿಯಿಂದ ಖುಷ್ಕಿ ಹಾಗೂ ಪಂಪ್‌ಸೆಟ್ ಜಮೀನುಗಳಿಗೆ ಹೋಗಿ ಬರಲು ಭಯವಾಗುತ್ತಿದೆ. ದನಗಾಹಿಗಳು ಜಾನುವಾರುಗಳನ್ನು ಮೇಯಿಸಲು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಹುಲಿ, ಚಿರತೆಗಳನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

Tags:
error: Content is protected !!