ಕೃಷ್ಣ ಸಿದ್ದಾಪುರ
ಅಣಬೆ ಕೃಷಿ ಗೃಹಿಣಿಯರಿಗೆ ಆದಾಯ ತರುವ ಉದ್ಯಮ
ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಅಣಬೆ ಕೃಷಿಗೆ ವಿಪುಲ ಅವಕಾಶಗಳಿದ್ದು, ಗೃಹಿಣಿಯರು ಮನೆಯಲ್ಲಿಯೇ ಅಣಬೆ ಬೇಸಾಯದಿಂದ ಉತ್ತಮ ಆದಾಯ ಗಳಿಸಬಹುದಾಗಿದೆ.
ಜಿಲ್ಲೆಯಲ್ಲಿ ಬಿಳಿಗುಂಡಿ ಅಣಬೆ ಅಥವಾ ಯುರೋಪಿನ ಬಿಳಿಗುಂಡಿ ಅಣಬೆ, ಹಾಲು (ಮಿಲ್ಕಿ) ಅಣಬೆ, ಕಪ್ಪೆ ಚಿಪ್ಪಿನ ಅಣಬೆ ಅಥವಾ ಡಿಂಗ್ರಿ ಅಣಬೆ, ಭತ್ತದ ಹುಲ್ಲಿನ ಅಣಬೆ, ಕಪ್ಪೆ ಚಿಪ್ಪಿನ ಅಣಬೆ ಬೇಸಾಯಕ್ಕೆ ಯೋಗ್ಯವಾಗಿದೆ. ಅದರಲ್ಲಿಯೂ ಕಪ್ಪೆ ಚಿಪ್ಪಿನ ಅಣಬೆಯನ್ನು ಸುಲಭವಾಗಿ ಕಡಿಮೆ ವೆಚ್ಚದಲ್ಲಿ ಕೈತೋಟದ ತರಕಾರಿಯಂತೆ ಮನೆಗಳಲ್ಲಿ ಬೆಳೆಯಬಹುದು. ಅಣಬೆಯನ್ನು ಭತ್ತದ ಹುಲ್ಲು ಮತ್ತು ಗೋಧಿ ಹುಲ್ಲುಗಳ ಮೇಲೆಯೂ ಬೆಳೆಯಬಹುದು. ಈ ಅಣಬೆಯು ಸುಮಾರು ೨೦-೨೮ ಸೆ. ಉಷ್ಣಾಂಶ ಮತ್ತು ಶೇ.೭೦ರಷ್ಟು ತೇವಾಂಶ ಇರುವ ಕಡೆಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಅಣಬೆಯ ಬೇಸಾಯಕ್ಕೆ ಒಣ ಭತ್ತದ ಹುಲ್ಲು, ಪಾಲಿಥೀನ್ ಚೀಲ (೧೨೧೮ ಅಂಗುಲ), ಅಣಬೆ ಬೀಜ (ಸ್ಪಾನ್) ಬೇಕಾಗುತ್ತದೆ. ಒಣ ಭತ್ತದ ಹುಲ್ಲನ್ನು ೩-೪ ಸೆಂ.ಮೀ. ಉದ್ದದ ತುಂಡುಗಳಾಗಿ ಕತ್ತರಿಸಿ, ಹುಲ್ಲನ್ನು ೮ ಗಂಟೆಗಳ ಕಾಲ ಶುಚಿಯಾದ ತಣ್ಣೀರಿನಲ್ಲಿ ನೆನೆಸಬೇಕು. ನೆನೆಸಿದ ನೀರನ್ನು ಬಸಿದು, ಹುಲ್ಲನ್ನು ಕುದಿಯುವ ನೀರಿನಲ್ಲಿ ಹಾಕಿ ಅರ್ಧಗಂಟೆ ಕಾಲ ಕುದಿಸಿ, ಬೇಯಿಸಿದ ಹುಲ್ಲನ್ನು ಕೊಠಡಿಯೊಳಗೆ ಶುಚಿಯಾದ ಜಾಗದಲ್ಲಿ ಪಾಲಿಥೀನ್ ಹಾಳೆಗಳ ಮೇಲೆ ಹರಡಿ ನೀರು ಬಸಿದು ಹೋಗಲು ಬಿಡಬೇಕು.
ಪಾಲಿಥಿನ್ ಚೀಲವನ್ನು ತೆಗೆದುಕೊಂಡು ತಂಪಾದ ಹುಲ್ಲನ್ನು ಪಾಲೀಥೀನ್ ಚೀಲದಲ್ಲಿ ಒಂದು ಪದರ ಹುಲ್ಲು (೪ ರಿಂದ ೫ ಇಂಚು) ಅನಂತರ ಅದರ ಮೇಲೆ ಅಣಬೆ ಬೀಜ (ಒಂದು ಹಿಡಿ) ಹರಡಬೇಕು. ಹೀಗೆ ಪದರವಾಗಿ ಹುಲ್ಲು ಮತ್ತು ಅಣಬೆ ಬೀಜ ಸೇರಿಸುತ್ತಾ ಚೀಲವನ್ನು ತುಂಬಿಸಬೇಕು. ತುಂಬಿದ ಚೀಲದಲ್ಲಿ ಹುಲ್ಲನ್ನು ಕೆಳಗೆ ಅದುಮಿ ಚೀಲದ ಬಾಯಿಯನ್ನು ರಬ್ಬರ್ ಬ್ಯಾಂಡ್ ಅಥವಾ ದಾರದಿಂದ ಕಟ್ಟಿ ಚೀಲದ ತಳದ ಎರಡು ಮೂಲೆಗಳಲ್ಲಿ ರಂಧ್ರಗಳನ್ನು ಮಾಡಿ ಹೆಚ್ಚಿನ ನೀರು ಬಸಿದು ಹೋಗುವಂತೆ ಮಾಡಬೇಕು. ಹಾಗೆಯೇ ಚೀಲದ ಮೈಮೇಲೆ ೫ ರಿಂದ ೬ ಸಣ್ಣ ರಂಧ್ರಗಳನ್ನು ಮಾಡಿ ಸ್ವಲ್ಪ ಗಾಳಿಯಾಡುವಂತೆ ಮಾಡಬೇಕು. ಹೀಗೆ ಸಿದ್ಧಪಡಿಸಿದ ಅಣಬೆ ಚೀಲಗಳನ್ನು ಬೆಳೆಸುವ ಕೋಣೆಗಳಲ್ಲಿ ಕಪಾಟುಗಳ ಮೇಲೆ ಜೋಡಿಸಿ ೨೦ ದಿನಗಳ ಕಾಲ ಇಡಬೇಕು.
ಇಪ್ಪತ್ತು ದಿನಗಳ ನಂತರ ಅಣಬೆಯ ತಂತುಗಳು ಹುಲ್ಲಿನಲ್ಲೆಲ್ಲ ಬೆಳೆದಿರುತ್ತದೆ. ಆಗ ಪಾಲಿಥೀನ್ ಚೀಲವನ್ನು ಕತ್ತರಿಸಿ ತೆಗೆಯಬೇಕು. ನಂತರ ಹುಲ್ಲು ಪೆಂಡಿಗಳನ್ನು ಕಪಾಟುಗಳ ಮೇಲೆ ಸಾಲಾಗಿಟ್ಟು ಪ್ರತಿ ದಿನ ೨-೩ ಬಾರಿ ಶುದ್ಧವಾದ ನೀರನ್ನು ಹದವಾಗಿ ಚಿಮುಕಿಸಬೇಕು. ಹೀಗೆ ಮಾಡಿದ ೨-೩ ದಿನಗಳಲ್ಲಿ ಅಣಬೆ ಮೊಳಕೆಗಳು ಕಾಣಿಸಿಕೊಳ್ಳುತ್ತವೆ. ಈ ಅಣಬೆಗಳನ್ನು ಒಂದು ಎರಡು ದಿನಗಳಲ್ಲಿ ಕೊಯ್ಲು ಮಾಡಿ ಪುನಃ ಹುಲ್ಲಿನ ಪೆಂಡಿಯ ಮೇಲೆ ನೀರು ಚಿಮುಕಿಸುತ್ತಿದ್ದರೆ ಮುಂದಿನ ೫-೬ ದಿನಗಳಲ್ಲಿ ಎರಡನೇ ಬಾರಿ ಮೊಳಕೆಗಳು ಬಂದು ಅಣಬೆಗಳು ಕೊಯ್ಲಿಗೆ ಬರುತ್ತವೆ. ಹೀಗೆ ಮೂರು ಬಾರಿ ಅಣಬೆ ಕೊಯ್ಲು ಮಾಡಬಹುದು. ಪ್ರತಿ ೨ ಕಿ.ಗ್ರಾಂ. ಒಣಗಿದ ಹುಲ್ಲಿನಿಂದ ಸುಮಾರು ೧ ಕಿ. ಗ್ರಾಂ. ಅಣಬೆ ಇಳುವರಿಯನ್ನು ಪಡೆಯಬಹುದು. ಅಣಬೆ ಬೆಳೆಯುವ ಕೊಠಡಿ ಶುಚಿಯಾಗಿರಬೇಕು. ಅಣಬೆ ಬೆಳೆ ಇಡುವ ಮುಂಚೆ ಶೇ.೨ ಫಾರ್ಮಲಿನ್ ದ್ರಾವಣ ಸಿಂಪಡಿಸಿ ೨ ದಿನಗಳ ನಂತರ ಬೆಳೆ ಪ್ರಾರಂಭಿಸಬೇಕು.
” ಅಣಬೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಆರ್ಥಿಕವಾಗಿ ಲಾಭದಾಯಕವಾದ ಕೃಷಿಯ ಬಗ್ಗೆ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ಆಸಕ್ತರು ಇದರ ಪ್ರಯೋಜನ ಪಡೆಯಬಹುದಾಗಿದೆ. ಅಣಬೆ ಬೀಜವು ಕೇಂದ್ರದಲ್ಲಿ ದೊರೆಯುತ್ತದೆ.”
-ಡಾ. ಕೆ.ವಿ. ವೀರೇಂದ್ರ ಕುಮಾರ್, ವಿಜ್ಞಾನಿಗಳು (ಸಸ್ಯ ಸಂರಕ್ಷಣೆ), ಕೆ.ವಿ.ಕೆ., ಗೋಣಿಕೊಪ್ಪ
” ಅಣಬೆ ಬೆಳೆಯಿಂದ ಉತ್ತಮ ಲಾಭ ಲಭಿಸುತ್ತಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ ರೂ.೩೬೦ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಕೃಷಿಯಲ್ಲಿ ಬಳಸಲಾದ ಹುಲ್ಲು ತ್ಯಾಜವನ್ನು ತೋಟಕ್ಕೆ ನೈಸರ್ಗಿಕ ಸಾವಯವ ರಸಗೊಬ್ಬರವಾಗಿ ಬಳಸಬಹುದಾಗಿದೆ. ರೈತರು ಕೃಷಿಯೊಂದಿಗೆ ಉಪ ಕೃಷಿಯನ್ನು ಅವಲಂಬಿಸುವುದರಿಂದ ಆರ್ಥಿಕ ಸಮತೋಲನ ಕಾಪಾಡಬಹುದು.”
-ಕಡ್ಲೆರ ಅವಿನಾಶ್, ರೈತ, ಬೆಟ್ಟಗೇರಿ ಗ್ರಾಮ
ಪೌಷ್ಟಿಕಾಂಶ ಹೆಚ್ಚು: ಅಣಬೆ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ. ಇದು ಹೆಚ್ಚು ಸಾರಜನಕ, ಮುಖ್ಯವಾದ ಜೀವಸತ್ವಗಳು ಮತ್ತು ಖನಿಜಾಂಶಗಳನ್ನು ಒಳಗೊಂಡಿವೆ. ಅಣಬೆಯಲ್ಲಿ ಸಕ್ಕರೆ ಮತ್ತು ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಮಧುಮೇಹ ರೋಗಿಗಳಿಗೆ ಮತ್ತು ಹೃದಯ ರೋಗಿಗಳಿಗೆ ಇದು ಒಂದು ಒಳ್ಳೆಯ ಆಹಾರ. ಅಣಬೆಯಿಂದ ಹಲವಾರು ರುಚಿಕರವಾದ ತಿಂಡಿ ತಿನಿಸುಗಳನ್ನು ತಯಾರಿಸಬಹುದಾಗಿದೆ. ಅಣಬೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೊಲಿಕ್ ಆಮ್ಲ ಇರುತ್ತದೆ. ಇದು ಅನೀಮಿಯಾ ನಿವಾರಕ ಗುಣವನ್ನು ಹೊಂದಿದೆ. ಅಣಬೆಯಲ್ಲಿನ ಶರ್ಕರಾ ಪಿಷ್ಠವು ಗೆಡ್ಡೆ ನಿರೋಧಕ ಶಕ್ತಿ ಹೊಂದಿರುವುದರಿಂದ ಇದನ್ನು ಕ್ಯಾನ್ಯರ್ ನಿರೋಧಕವಾಗಿಯೂ ಬಳಸಲಾಗುತ್ತದೆ. ಅಣಬೆಯಲ್ಲಿ ಇರ್ಮ್‌ಗೊಸ್ಟಿರಾಲ್ ಎಂಬ ರಾಸಾಯನಿಕವಿದೆ. ಇದು ಮನುಷ್ಯನ ಶರೀರದಲ್ಲಿ ಡಿ ಜೀವಸತ್ವವಾಗಿ ಪರಿವರ್ತನೆಯಾಗಬಲ್ಲದು. ಅಣಬೆಯಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಮಲವಿಸರ್ಜನೆಗೆ ಸಹಾಯಕವಾಗಿದೆ.



