Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಮಹಾಭಾರತ: ಹೊಸ ಅರ್ಥ ಕಟ್ಟಲು ಯತ್ನಿಸಿದ ರಾಮು

ʼರಾಮು ಅವರಮಹಾಭಾರತದೊಳಗಿಂದ ಒಂದಿಷ್ಟುಕೃತಿ ಬಿಡುಗಡೆ ಮಾಡಿದ ..ರಘುನಾಥ ಅಭಿಮತ

ಮೈಸೂರು: ಸಾವಿರಾರು ವರ್ಷಗಳ ಹಿಂದಿನ ಮಹಾಭಾರತವನ್ನು ಸಮಕಾಲೀನ ಸಮಾಜದ ತಲ್ಲಣ, ಸಂಕಟ ಮತ್ತು ಅಸ್ತಿತ್ವದ ಪ್ರಶ್ನೆಗಳೊಂದಿಗೆ ಜೋಡಿಸಿ ಹೊಸ ಅರ್ಥಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ಲೇಖಕ ಹಾಡುಪಾಡು ರಾಮು ಅವರು ತಮ್ಮ ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿಯಲ್ಲಿ ಮಾಡಿದ್ದಾರೆ ಎಂದು ಹಿರಿಯ ಪತ್ರಕರ್ತ ಚ.ಹ.ರಘುನಾಥ ಅಭಿಪ್ರಾಯಪಟ್ಟರು.

ನಗರದ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಅಭಿರುಚಿ ಪ್ರಕಾಶನ ಹೊರತಂದಿರುವ ಹಾಡುಪಾಡು ರಾಮು ಅವರ ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವ್ಯಾಸಭಾರತವನ್ನು ತನ್ನ ಕಾಲಘಟ್ಟದ ಅಗತ್ಯಕ್ಕೆ ತಕ್ಕಂತೆ ಪಂಪನು ‘ವಿಕ್ರಮಾರ್ಜುನ ವಿಜಯ’ವಾಗಿ ಮರು ಸೃಷ್ಟಿಸಿದಂತೆ, ರಾಮು ಅವರಿಗೂ ಮಹಾಭಾರತವನ್ನು ತಮ್ಮ ಭಾಷೆಯಲ್ಲಿ ಪುನರ್ ವ್ಯಾಖ್ಯಾನಿಸುವ ತುರ್ತು ಮತ್ತು ಅನಿವಾರ್ಯತೆ ಇತ್ತು ಅನಿಸುತ್ತದೆ. ಸಮಾಜದ ತವಕ ಮತ್ತು ನೋವುಗಳಿಗೆ ಸ್ಪಂದಿಸುವ ರಾಮು ಅವರಿಗೆ ಮಹಾಭಾರತದಂತಹ ಕೃತಿಯೊಂದಿಗೆ ವಿಶೇಷ ಅನುಸಂಧಾನ ಸಾಧ್ಯವಾಗಿದೆ ಎಂದು ಹೇಳಿದರು.

ಕೃತಿಯಲ್ಲಿ ಶಕುಂತಲೆ ಮತ್ತು ಭರತನ ಕಥೆಯ ಮೂಲಕ ಅಸ್ತಿತ್ವ ಹಾಗೂ ಗುರುತಿನ ಪ್ರಶ್ನೆಯನ್ನು ಚರ್ಚಿಸಲಾಗಿದೆ. ತನ್ನದೇ ಮಗನ ಅಸ್ತಿತ್ವವನ್ನು ಪ್ರಶ್ನಿಸುವ ಸಂದಿಗ್ಧ ಪರಿಸ್ಥಿತಿ ತಂದೆಯಾದ ಧೃತರಾಷ್ಟ್ರ ಸೃಷ್ಟಿಸುತ್ತಾನೆ. ಅದು ಇವತ್ತಿನ ಸಂದಿಗ್ಧತೆ ಕೂಡ ಎಂದರು. ಎಸ್‌ಐಆರ್ (ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ಮೂಲಕ ನಮ್ಮ ಪೌರತ್ವವನ್ನು ಸಾಬೀತು ಮಾಡುವಂತೆ ವ್ಯವಸ್ಥೆ ಕೇಳುತ್ತಿರುವುದು, ಅಧಿಕಾರ ಮದದ ರಾಜಕಾರಣ ಅವತ್ತಿಗೂ  ದುಷ್ಯಂತನ ರೂಪದಲ್ಲಿ ಕೆಲಸ ಮಾಡುತ್ತಿತ್ತು ಅನಿಸುತ್ತದೆ. ಅಲ್ಲಿ ದುಷ್ಯಂತನಿಗೆ ಅಶರೀರವಾಣಿಯೊಂದು ಆಕೆ ನಿನ್ನ ಪತ್ನಿ ಎಂದು ಹೇಳಿ ಸುಖಾಂತ್ಯವಾಗುತ್ತದೆ. ಆದರೆ, ಇವತ್ತಿನ ಸಂದರ್ಭದಲ್ಲಿ ಯಾವ ಅಶರೀರವಾಣಿಯೂ ಇಲ್ಲ. ಸರ್ಕಾರದ ಹೊರತು ನ್ಯಾಯವನ್ನು ಒದಗಿಸುವ ವ್ಯವಸ್ಥೆಯೇ ಇಲ್ಲವಾಗಿದೆ ಎಂದರು.

ರಾಮು ಅವರ ಮಹಾಭಾರತ ಸಾವಿರಾರು ವರ್ಷಗಳ ಕಥನ ಇರಬಹುದು. ಆದರೆ, ಆ ಕಥನವನ್ನು ವರ್ತಮಾನದ ಸಂಕಟ, ತಲ್ಲಣಗಳನ್ನು ರೂಪಿಸುವ ನಿಟ್ಟಿನಲ್ಲಿ ಕೃತಿ ರೂಪುಗೊಂಡಿದೆ. ಶಂಕು ತಲೆ, ಭರತ ಮಾತ್ರವಲ್ಲ ಅನೇಕ ಪಾತ್ರಗಳು ತಮ್ಮ ಗುರುತು ಮತ್ತು ಅಸ್ತಿತ್ವಕ್ಕಾಗಿ ಹುಡುಕಾಟ ನಡೆಸಿವೆ. ಇಡೀ ಕಥನವನ್ನು ಎಷ್ಟು ಸಾಧ್ಯವೋ ಹೊಸ ಸಾಧ್ಯತೆಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.

ದ್ರೌಪದಿಯ ಪ್ರಸಂಗದಲ್ಲಿ ಕೃಷ್ಣನ ಕರುಣೆ ಕಾಣುತ್ತದೆ. ಆದರೆ, ಕೃತಿಯಲ್ಲಿ ದ್ರೌಪದಿಯ ಸಭಾ ಪ್ರವೇಶದ ಪ್ರಸಂಗವನ್ನು ರಾಮು ಅವರು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ‘ಧರ್ಮ ಯಾವುದು?’ ಎಂಬ ದ್ರೌಪದಿಯ ಪ್ರಶ್ನೆಗೆ ಸಭೆ ತಲೆ ತಗ್ಗಿಸುವ ಮೂಲಕ ಮುಕ್ತಾಯಗೊಳಿಸುತ್ತಾರೆ. ಮುಂದೆ ಏನು ಆಗುವುದನ್ನು ನಮ್ಮ ಕಲ್ಪನೆಗೆ ಬಿಡುತ್ತಾರೆ ಎಂದರು.

ಕಥೆಗಾರ ಅಬ್ದುಲ್ ರಶೀದ್ ಮಾತನಾಡಿ, ಇದು ರಾಜಮಹಾರಾಜರ ನಡುವೆ ನಡೆದ ಕಥೆಯಲ್ಲ. ಬದಲಿಗೆ ಇಬ್ಬರು ಆದಿವಾಸಿಗಳ ನಡುವಿನ ಕಥನ. ಜೀವನವನ್ನು ಸಂಭ್ರಮಿಸುವ ನಮ್ಮೆಲ್ಲರ ಮಹಾಭಾರತ ಕೃತಿ ಎಂದು ಬಣ್ಣಿಸಿದರು. ರಾಮು ಅವರೊಂದಿಗೆ ನನ್ನ ಒಡನಾಟ ನನ್ನ ಜೀವನದ ಅಮೂಲ್ಯ ಸಮಯ. ನನ್ನ ಮದುವೆಯನ್ನು ಅವರೇ ಮಾಡಿಸಿದ್ದು. ಸದಾ ಕ್ರಾಂತಿಯ ಮೂಡಿನಲ್ಲಿದ್ದ ನನಗೆ ಪುಸ್ತಕ ಓದಲು ಪ್ರೇರೇಪಿಸುತ್ತಿದ್ದರು. ರಾಮು ಅವರಿಗೆ ಬೆಕ್ಕುಗಳನ್ನು ಕಂಡರೆ ಇಷ್ಟ. ಅದಕ್ಕೆ ಮಾಂಸಾಹಾರ ಬೇಕಿತ್ತು. ನಾನು ಅವುಗಳಿಗೆ ಹಾಸ್ಟೆಲ್‌ನಿಂದ ಪೀಸ್ ತಂದು ಕೊಡುತ್ತಿದ್ದೆ. ರಾಮು ಅವರಿಗೆ ಜೀವನ ಪ್ರೀತಿ ಅಪಾರವಾಗಿತ್ತು. ಮಹಾಭಾರತದ ಬಗ್ಗೆ ಯಾರೆ ಬರೆದಿದ್ದಾರೆ ಅದನ್ನೆಲ್ಲ ಓದಿಕೊಂಡಿದ್ದರು ಎಂದು ಸ್ಮರಿಸಿದರು.

ಮದುವೆಯಾಗದೆ ತಪ್ಪಿಸಿಕೊಂಡು ಹೋಗುತ್ತಿದ್ದ ನನಗೆ ರಾಮು ಅವರು ತಮ್ಮ ಮನೆಯಲ್ಲೇ ಏಸು ಕ್ರಿಸ್ತನ ಫೋಟೋ ಮುಂದೆ ಮಲ್ಯಳ ಜೊತೆ ನಿಲ್ಲಿಸಿ ಇವತ್ತಿನಿಂದ ನೀವು ಗಂಡ- ಹೆಂಡತಿ ಎಂದು ಹರಸಿದ್ದರು. ರಾಮು ಬರೆದ ಕೃತಿಯನ್ನು ದೇವನೂರ ಮಹಾದೇವ ಅವರು ಕಣ್ಣಾಡಿಸಿ ಹೊರತಂದಿದ್ದಾರೆ. ಇಬ್ಬರ ಕುಲುಮೆಯಲ್ಲಿ ಅರಳಿದ ಮಹಾಭಾರತ ಕೃತಿ ಇದು. ಅಲೆಮಾರಿಗಳ, ಆದಿವಾಸಿಗಳ, ಬುಡಬುಡಿಕೆ, ಕರಡಿ ಹಿಡಿಯುವವರು ಸೇರಿದಂತೆ ನಮ್ಮೆಲ್ಲರ ಮಹಾಭಾರತ ಇದು ಎಂದು ಅಭಿಪ್ರಾಯಪಟ್ಟರು.

ವಿಮರ್ಶಕ ಓ.ಎಲ.ನಾಗಭೂಷಣ ಸ್ವಾಮಿ ಮಾತನಾಡಿ, ನಾನು, ರಾಮು ಜೊತೆಯಲ್ಲಿ ಓದಿದೆವು. ರಾಮು ಎಂದರೆ ಅಪ್ಪಟ್ಟ ಮನುಷ್ಯ ಜೀವಿ. ಅವನ ಪರಿಚಯ ನನ್ನ ಬದುಕಿನ ಭಾಗ್ಯ. ನಾನು ಪೂನಾಗೆ ಓದಲು ಹೋದಾಗ ವಾರಕ್ಕೆ ಮೂರು ಪತ್ರ ಬರೆಯುತ್ತಿದ್ದ. ಅದನ್ನೆಲ್ಲಾ ಸಂಗ್ರಹಿಸಿದ್ದರೆ ಮೂರು ಪುಸ್ತಕ ಮಾಡಬಹುದಿತ್ತು. ಅವನದು ಮಗುವಿನ ಮನಸ್ಸು. ಆದರೆ, ವಿದ್ವತ್ ಪೂರ್ಣ ಆಲೋಚನೆ, ಎಲ್ಲರಿಗೂ ಸಮಾಧಾನ, ಉತ್ಸಾಹ ತುಂಬುತ್ತಿದ್ದ ಅಪರೂಪದ ವ್ಯಕ್ತಿ ಎಂದು ನೆನಪಿನಾಳಕ್ಕೆ ಜಾರಿದರು. ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ರಾಮು ಎಲ್ಲರಿಗೂ ಆಪ್ತನಾದವನು. ಇಂದು ಅವನ ಪುಸ್ತಕ ಬರೋದಕ್ಕೆ ದೇವನೂರ ಮಹಾದೇವ ಅವರ ಶ್ರಮ ದೊಡ್ಡದು. ಮಹಾಭಾರತ ಅವನಿಗೆ ಪ್ರಿಯವಾದ ಪಠ್ಯ. ಇಂದು ರಾಮು ಇಲ್ಲ ಎಂದು ಹೇಳಲಾರೆ.

ಅವನು ನಮ್ಮ ಜೊತೆಯೇ ಉರಿಯುತ್ತಿರುವ ಬೆಳಕು. ರಾಮು ಎಂದರೆ ದಾರಿ ದೀಪ. ಆ ದೀಪವನ್ನು ಹೊತ್ತುಕೊಂಡು ಅವರನ್ನು ಬೆಳಗಿಸುತ್ತ ಹೋಗೋಣ. ಅವನಿಗಿದ್ದ ಪಾಂಡಿತ್ಯ ಯಾವ ವಿವಿಯಲ್ಲಿ ಹುಡುಕಿದರೂ ಸಿಗುವುದಿಲ್ಲ ಎಂದು ಅವರು ಭಾವುಕರಾದರು.

ಹಿರಿಯ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಮಾತನಾಡಿ, ಮಹಾಭಾರತದಂತಹ ಮಹಾಕಾವ್ಯವನ್ನು ಹೊಸ ಆಯಾಮದಲ್ಲಿ ವ್ಯಾಖ್ಯಾನಿಸುವುದು ಸುಲಭದ ಕೆಲಸವಲ್ಲ. ಆದರೆ ಲೇಖಕ ಹಾಡುಪಾಡು ರಾಮು ಅವರು ಅದನ್ನು ಅತ್ಯಂತ ಯಶಸ್ವಿಯಾಗಿ ಸಾಧಿಸಿದ್ದಾರೆ ಎಂದರು. ಹೆಣ್ಣು ಮಕ್ಕಳ ಸಮಸ್ಯೆಗಳು ಸೇರಿದಂತೆ ಅನೇಕ ಸಾಮಾಜಿಕ ವಿಚಾರಗಳು ಮಹಾಭಾರತದಲ್ಲಿ ರೂಪುಗೊಂಡಿವೆ. ರಾಮು ಅವರು ವಿವಿಧ ಮೂಲಗಳಿಂದ ವಿಷಯಗಳನ್ನು ಸಂಗ್ರಹಿಸಿ, ಇಡೀ ಭಾರತದ ಶತಮಾನಗಳ ಬದುಕಿನ ಕನ್ನಡಿಯಂತಿರುವ ಮಹಾಭಾರತವನ್ನು ಹೊಸ ದೃಷ್ಟಿಕೋನದಲ್ಲಿ ಓದುಗರ ಮುಂದಿಟ್ಟಿದ್ದಾರೆ. ಪಂಪ, ಕುಮಾರವ್ಯಾಸ ಸೇರಿದಂತೆ ಹಲವು ಕವಿಗಳು ಮಹಾಭಾರತವನ್ನು ನಿರೂಪಿಸಿದರೂ, ವ್ಯಾಸ ಮಹಾಭಾರತದ ಕೆಲವು ಅಂಶಗಳನ್ನು ರಾಮು ಅವರು ವಿಶಿಷ್ಟವಾಗಿ ವ್ಯಾಖ್ಯಾನಿಸಿದ್ದಾರೆ. ಕೃತಿಯ ಕೊನೆಯಲ್ಲಿ ಕಾಣುವ ಶ್ಲೋಕ ಹಾಗೂ ಅದರ ವ್ಯಾಖ್ಯಾನ ಅತ್ಯಂತ ಪರಿಣಾಮಕಾರಿಯಾಗಿದೆ. ಅದು ರಾಮು ಅವರ ಸೇರ್ಪಡೆಯೋ ಅಥವಾ ಲಕ್ಷ್ಮೀಶ ತೋಳ್ಪಾಡಿಯವರ ಪ್ರಭಾವವೋ ಎನ್ನುವ ಅನುಮಾನ ಮೂಡಿಸಿದರೂ, ಯಾವುದೇ ಕವಿಯೂ ನೀಡದಂತಹ ವಿಶಿಷ್ಟ ಅರ್ಥ ವ್ಯಾಖ್ಯಾನವನ್ನು ಕೃತಿ ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾಭಾರತವು ಕೇವಲ ಒಂದು ಕಥೆಯಲ್ಲ; ಅದು ನಮ್ಮ ನಂಬಿಕೆ, ಸಂಪ್ರದಾಯ ಮತ್ತು ಜೀವನದ ನರನಾಡಿಗಳಲ್ಲಿ ಬೆರೆತುಹೋಗಿರುವ ಸಾಂಸ್ಕ ತಿಕ ಗ್ರಂಥವಾಗಿದೆ. ವಿಶೇಷವಾಗಿ ಜನಪದ ಬದುಕಿನಲ್ಲಿ ಅದರ ಪ್ರಭಾವ ಇನ್ನಷ್ಟು ಗಾಢವಾಗಿದೆ. ಹಲವು ಮರುವ್ಯಾಖ್ಯಾನಗಳು ಬಂದಿದ್ದರೂ, ರಾಮು ಅವರು ಮಹಾಭಾರತವನ್ನು ಅದ್ಭುತವಾಗಿ ಪುನರ್ ಸೃಷ್ಟಿಸಿದ್ದಾರೆ ಎಂದು ಹೇಳಿದರು.

ದ್ರೌಪದಿಗೆ ಐದು ಮಂದಿ ಗಂಡಂದಿರು ಎಂಬುದನ್ನು ಕೇವಲ ಕಥೆಯಾಗಿ ನೋಡುವುದಕ್ಕಿಂತ, ಅದು ಆಕೆಯ ಮನಸ್ಥಿತಿಯ ರೂಪಕವೆಂದು ಅರ್ಥೈಸಬೇಕಾಗಿದೆ. ವ್ಯಾಸರು ಲೆಕ್ಕಾಚಾರದೊಂದಿಗೆ ಮಹಾಭಾರತವನ್ನು ರಚಿಸಿದ್ದು, ಇಡೀ ಮಹಾಭಾರತವೇ ಒಂದು ಮಹತ್ತರ ರೂಪಕವಾಗಿದೆ. ಆ ರೂಪಕ ಇಂದಿಗೂ ಆಲದ ಮರದ ನೆರಳಿನಂತೆ ಸಮಾಜಕ್ಕೆ ತಿಳಿವಳಿಕೆ ನೀಡುತ್ತಿದೆ ಎಂದು ಹೇಳೀದರು.

ಕಾರ್ಯಕ್ರಮಕ್ಕೂ ಮುನ್ನ ಎಸ್.ವಿ.ಸಹನಾ ತಂಡದಿಂದ ನಾದ ನಮನ ಕಾರ್ಯಕ್ರಮ ನಡೆಯಿತು. ಅಭಿರುಚಿ ಗಣೇಶ್, ಪ್ರೊ.ಪಂಡಿತಾರಾಧ್ಯ, ಪ್ರೊ.ಟಿ.ಎಸ್.ವೇಣುಗೋಪಾಲ್, ಪದ್ಮಾ ಶ್ರೀರಾಮ್, ಮೀನಾ ಮೈಸೂರು, ರಂಗಾಯಣದ ಮಾಜಿ ನಿರ್ದೇಶಕರಾದ ಸಿ.ಬಸವಲಿಂಗಯ್ಯ, ಎಚ್.ಜನಾರ್ಧನ್, ಹರಿಹರ ಆನಂದಸ್ವಾಮಿ, ಅಬ್ರಹಾಂ ಡಿ’ಸಿಲ್ವಾ, ವಿಕ್ರಂ ಚದುರಂಗ, ಪ್ರೀತಿ ನಾಗರಾಜ, ಕುಪ್ಪೆ ನಾಗರಾಜು, ಹೊಸಕೋಟೆ ಬಸವರಾಜು, ಶಿವಸ್ವಾಮಿ, ಸೋಮಯ್ಯ ಮಲೆಯೂರು, ಸುಗುಣ, ಮೈಸೂರು ಉಮೇಶ್, ಡಾ.ಎಸ್. ನರೇಂದ್ರ ಕುಮಾರ್, ಎಚ್.ವಾಸು, ಸಿದ್ದರಾಜು, ಕೀರ್ತಿ ಬೈಂದೂರು, ಡಾ.ಎಂ.ಎಸ್.ಶೇಖರ್, ಅಮ್ಮಯ್ಯ ಶೇಖರ್, ಕೃ.ಪಾ.ಗಣೇಶ್, ಡಾ.ಎ.ಶಿವಸ್ವಾಮಿ, ಡಾ.ಅಕ್ಕಮಹಾದೇವಿ, ಎಸ್.ತುಕರಾಂ, ರವಿ ಕೋಟಿ, ರಶ್ಮಿ ಕೋಟಿ, ಶೀತಲ್ ಕೋಟಿ, ಸುಶೀಲ ಬಸವಲಿಂಗಯ್ಯ, ದೇವನೂರು ಶಿವಮಲ್ಲು, ಕೆ.ಎನ್.ಶಿವಲಿಂಗಯ್ಯ, ಜಯರಾಮ್ ಸೇರಿದಂತೆ ಚಿಂತಕರು, ಒಡನಾಡಿಗಳು ಭಾಗವಹಿಸಿದ್ದರು.

” ‘ಆಂದೋಲನ’ ದಿನಪತ್ರಿಕೆಯಲ್ಲಿ ಹಾಡುಪಾಡು ರಾಮು ಅವರು ೨೫ ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಬರೆಯುತ್ತಿದ್ದರು. ತಮ್ಮ ಹೆಸರಿನಲ್ಲಿ ಮಾತ್ರವಲ್ಲದೆ ಹಲವು ಗುಪ್ತನಾಮ ಗಳಲ್ಲಿಯೂ ಲೇಖನಗಳನ್ನು ಬರೆದಿದ್ದರು. ಸೊಪ್ಪು ಮಾರುವ ಮಹಿಳೆಯ ಜೀವನದಿಂದ ಹಿಡಿದು ಆಫ್ರಿಕಾ ಖಂಡದ ಸಾಮಾಜಿಕ-ಸಾಂಸ್ಕೃತಿಕ ವಿಚಾರಗಳವರೆಗೆ, ಪ್ರಾಣಿ-ಪಕ್ಷಿಗಳ ಲೋಕದಿಂದ ಜನಪದ ಬದುಕಿನ ಸೂಕ್ಷ್ಮ ಸಂಗತಿಗಳವರೆಗೆ ರಾಮು ಅವರ ಬರವಣಿಗೆಯ ವ್ಯಾಪ್ತಿ ವಿಸ್ತರಿಸಿತ್ತು. ಪ್ರತಿವಾರ ನಾಲ್ಕು ಪುಟಗಳಷ್ಟು ವೈವಿಧ್ಯಮಯ ವಿಷಯಗಳನ್ನು ಅವರು ಓದುಗರ ಮುಂದಿಡುತ್ತಿದ್ದರು. ‘ಆಂದೋಲನ’ದ ಗೆಳೆಯರು ರಾಮು ಅವರ ಚದುರಿದ ಬರಹಗಳನ್ನು ಸಂಗ್ರಹಿಸಿ ಪ್ರಕಟಿಸಿದರೆ, ಅವರ ದೊಡ್ಡ ಮನಸ್ಸು, ವಿಶಾಲ ದೃಷ್ಟಿಕೋನ ಹಾಗೂ ಭಾಷೆಯ ಮೇಲಿನ ಅಪರೂಪದ ಹಿಡಿತ ಹೊಸ ತಲೆಮಾರಿಗೆ ತಿಳಿಯಲಿದೆ.”

– ಓ.ಎಲ್.ನಾಗಭೂಷಣ ಸ್ವಾಮಿ

Tags:
error: Content is protected !!