Mysore
24
broken clouds

Social Media

ಸೋಮವಾರ, 27 ಏಪ್ರಿಲ 2026
Light
Dark

ಕುಡಿಯಲು ಶುದ್ಧ ನೀರಿಲ್ಲದೆ ಆಲಗೂಡು ಗ್ರಾಮಸ್ಥರ ಪರದಾಟ

ಸಿದ್ದೇಗೌಡ ಕೊಡಿಯಾಲ

ಶ್ರೀರಂಗಪಟ್ಟಣ : ತಾಲ್ಲೂಕಿನ ಆಲಗೂಡು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಬಂದೊದಗಿದೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಆಲಗೂಡು ಗ್ರಾಮದಲ್ಲಿ ಎಲ್ಲ ಜನಾಂಗಗಳೂ ಸೇರಿ ಸುಮಾರು ಎರಡು ಸಾವಿರ ಜನಸಂಖ್ಯೆ ಇದೆ. ಗ್ರಾಮದಲ್ಲಿ ಶೇ. ೮೦ ದಲಿತ ಕುಟುಂಬಗಳು ವಾಸಿಸುತ್ತಿದ್ದು,ಈ ಕುಟುಂಬಗಳಿಗೆ ಅನುಕೂಲ ಕಲ್ಪಿಸಲು ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ನೀರು ಶೇಖರಣೆ ಟ್ಯಾಂಕ್ ಹಾಗೂ ಮೋಟಾರನ್ನು ಅಳವಡಿಸಲಾಗಿದೆ. ಆದರೆ, ಈ ಘಟಕವು ಎರಡು ಮೂರು ವರ್ಷ ಗಳಿಂದ ಕಾರ್ಯನಿರ್ವಹಿಸದೆ, ಉಪಕರಣಗಳು ತುಕ್ಕು ಹಿಡಿದು ನಿರುಪಯುಕ್ತವಾಗಿವೆ.

ಗ್ರಾಮದ ಮತ್ತೊಂದು ಶುದ್ಧ ಕುಡಿಯುವ ನೀರಿನ ಘಟಕವೂ ನೀರಿನ ಪೂರೈಕೆ ಇಲ್ಲದೆ ಕೆಟ್ಟು ನಿಂತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಶುದ್ಧ ಕುಡಿಯುವ ನೀರು ಎಲ್ಲಿಂದ ತರುತ್ತೀರಾ ಎಂದು ಗ್ರಾಮದ ಮಹಿಳೆಯೊಬ್ಬರನ್ನು ಕೇಳಿದರೆ, ಬೋರ್‌ವೆಲ್‌ನಿಂದ ನೇರವಾಗಿ ಓವರ್‌ಹೆಡ್ ಟ್ಯಾಂಕ್‌ಗೆ ಸರಬರಾಜಾಗುತ್ತದೆ. ನಂತರ ನಲ್ಲಿಗಳಿಗೆ ನೀರು ಬರುತ್ತದೆ. ಈ ನೀರನ್ನೇ ನಾವು ಕುಡಿಯುವುದಕ್ಕೆ ಬಳಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

ಜಲಜೀವನ್ ಮಿಷನ್ ವತಿಯಿಂದ ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸ ಲಾಗುವುದು ಎಂಬ ಘೋಷಣೆ ಯೊಂದಿಗೆ ಆಲಗೂಡು ಗ್ರಾಮದಲ್ಲಿ ಪೈಪ್‌ಲೈನ್ ಅಳವಡಿಸಿ ಎಲ್ಲರ ಮನೆ ಮುಂದೆ ನಳಗಳನ್ನು ಅಳವಡಿಸಿ ಮೂರು ತಿಂಗಳು ಕಳೆದರೂ ಶುದ್ಧ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ನಮ್ಮ ಗ್ರಾಮದ ಸುತ್ತಮುತ್ತ ಯಾವುದೇ ಜಲಮೂಲಗಳಿಲ್ಲ. ನಮ್ಮ ಗ್ರಾಮದ ಟ್ಯಾಂಕ್‌ಗೆ ಪಕ್ಕದ ಗ್ರಾಮವಾದ ಚೆನ್ನನಕೆರೆ ಗ್ರಾಮದಿಂದ ನೀರು ಸರಬರಾಜು ಆಗುತ್ತದೆ. ಈ ನೀರು ಶುದ್ಧೀಕರಣ ಆಗಿರುವುದಿಲ್ಲ. ಇದೇ ನೀರನ್ನು ಬಳಸುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನೀರಿನಲ್ಲಿ ಉಪ್ಪಿನ ಸಾಂದ್ರತೆ ಬಗ್ಗೆ ಗ್ರಾಮದ ಜನರಿಗೆ ತಿಳಿದಿಲ್ಲ. ಈ ಬಗ್ಗೆ ಗ್ರಾಮದ ಮುಖಂಡರನ್ನು ಮಾತನಾಡಿಸಿದಾಗ, ‘ನಮ್ಮ ಗ್ರಾಮವು ಮಳೆ ಆಶ್ರಿತ ಪ್ರದೇಶವಾಗಿದ್ದು, ಗ್ರಾಮದ ಪಕ್ಕ ವಿಶ್ವೇಶ್ವರಯ್ಯ ಲಿಂಕ್ ಕಾಲುವೆ ಇದೆ. ವರ್ಷದಲ್ಲಿ ಆರು ತಿಂಗಳು ಮಾತ್ರ ಈ ಕಾಲುವೆಯಲ್ಲಿ ಕಾವೇರಿ ನೀರು ಹರಿಯುತ್ತದೆ. ಈ ಕಾಲುವೆಯಿಂದ ನೀರನ್ನು ಶುದ್ಧೀಕರಣ ಮಾಡಿ ಕುಡಿಯಲು ಸರಬರಾಜು ಮಾಡಿದರೆ ನಮ್ಮ ಊರಿಗೆ ಕುಡಿಯುವ ನೀರಿನ ಬವಣೆ ತಪ್ಪುತ್ತದೆ ಎಂದು ಅಳಲು ತೋಡಿಕೊಂಡರು. ಕ್ಷೇತ್ರದ ಶಾಸಕ ಎ. ಬಿ. ರಮೇಶ್‌ಬಾಬು ಬಂಡಿಸಿದ್ದೇಗೌಡ ಅವರು ಇತ್ತ ಗಮನಹರಿಸಿ, ಗ್ರಾಮದ ಜನಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಲಗೂಡು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Tags:
error: Content is protected !!