ಬೆಂಗಳೂರು : ರಾಜ್ಯದ ಮೆಕ್ಕೆಜೋಳ ಹಾಗೂ ಹೆಸರುಕಾಳು ಬೆಳೆಗಾರರು ಮಾರುಕಟ್ಟೆ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಮಧ್ಯಪ್ರವೇಶ ಮಾಡಿ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಉಡುಪಿಗೆ ಭೇಟಿ ನೀಡಲು ಸಲುವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮನವಿ ಪತ್ರ ಸಲ್ಲಿಸಿದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ರಾಜ್ಯದ ಮೆಕ್ಕೆಜೋಳ ಹಾಗೂ ಹೆಸರುಕಾಳು ಬೆಳೆಗಾರರು ಮಾರುಕಟ್ಟೆ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರವು ತಕ್ಷಣ ಮಧ್ಯಪ್ರವೇಶ ಮಾಡಿ ಕನಿಷ್ಠ ಬೆಂಬಲ ಬೆಲೆ, ಎಥೆನಾಲ್ ಹಂಚಿಕೆಯಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ, ರೈತರಿಗೆ ದೊರೆಕಬೇಕಾದ ನ್ಯಾಯಯುತ ಬೆಲೆ ಸಿಗುವಂತೆ ಮಾಡಬೇಕೆಂದು ಪ್ರಧಾನಿ ಮೋದಿಯವರಿಗೆ ಪತ್ರದ ಮೂಲಕ ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಉಡುಪಿಗೆ ಭೇಟಿನೀಡಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮೋದಿಯವರನ್ನು ರಾಜ್ಯಕ್ಕೆ ಬರಮಾಡಿಕೊಂಡು, ನಮ್ಮ ಮನವಿ ಪತ್ರವನ್ನು ಅವರಿಗೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ತಕ್ಷಣ ರಾಜ್ಯದ ರೈತರ ಕಷ್ಟವನ್ನು ಅರ್ಥೈಸಿಕೊಂಡು, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದು ಭಾವಿಸಿದ್ದೇನೆಂದು ತಿಳಿಸಿದ್ದಾರೆ.
ಸಚಿವ ದಿನೇಶ್ ಗುಂಡರಾವ್ ಅವರು ಕೂಡ ಪೋಸ್ಟ್ ಮಾಡಿದ್ದು, ರೈತರ ಬೆಳೆಗಳಿಗೆ ಬೆಂಬಲ ಬೆಲೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಬೆಂಬಲ ಬೆಲೆಯಂತೆ ಬೆಳೆ ಖರೀದಿ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಚ್ಛಾಶಕ್ತಿ ತೋರಿಸಬೇಕೆಂದು ಮನವಿ ಮಾಡಿಕೊಂಡಿದ್ದೇನೆಂದು ಹೇಳಿದ್ದಾರೆ.
ಇದನ್ನು ಓದಿ: ತಿರುಪತಿ ಕಲಬೆರೆಕೆ ತುಪ್ಪ ಹಗರಣ : ಟಿಟಿಡಿ ಅಧಿಕಾರಿ ಬಂಧನ
ಪತ್ರದ ಸಾರಾಂಶ ಇಂತಿದೆ?
ಕರ್ನಾಟಕದಲ್ಲಿ ಮೆಕ್ಕೆಜೋಳ ಮತ್ತು ಹೆಸರು ಕಾಳು ಬೆಳೆಗಳ ತೀವ್ರ ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದ ಬೆಂಬಲ ಬೆಲೆಯಲ್ಲಿ ರೈತರಬೆಳೆಗಳನ್ನು ಖರೀದಿಸುವಂತಹ ವ್ಯವಸ್ಥೆ ನಿರ್ಮಾಣ ಮಾಡಬೇಕು. ನಮ್ಮ ಲಕ್ಷಾಂತರ ರೈತರು ಜೀವನೋಪಾಯಕ್ಕಾಗಿ ಕೃಷಿ ಮಾಡಿರುವ ಬೆಳೆಗಳನ್ನು ಖರೀದಿಸುತ್ತಿರುವ ಬೆಲೆ ಕೇಂದ್ರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಬಹಳಷ್ಟು ಕಡಿಮೆ ಇದ್ದು, ಕೃಷಿಕರಲ್ಲಿ ವ್ಯಾಪಕ ಸಂಕಷ್ಟವನ್ನು ಸೃಷ್ಟಿಸಿದೆ. ಈ ಮುಂಗಾರು ಹಂಗಾಮಿನಲ್ಲಿ ಕರ್ನಾಟಕವು ೧೭.೯೪ ಲಕ್ಷ ಹೆಕ್ಟೇರ್‌ಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಮತ್ತು ೪.೧೬ ಲಕ್ಷ ಹೆಕ್ಟೇರ್‌ಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಹೆಸರು ಕಾಳನ್ನು ಬೆಳೆದಿದೆ. ರಾಜ್ಯವು ೫೪.೭೪ ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಮೆಕ್ಕೆಜೋಳ ಮತ್ತು ೧.೯೮೩ ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಹೆಸರು ಕಾಳಿನ ಅಂದಾಜು ಉತ್ಪಾದನೆಯನ್ನು ನಿರೀಕ್ಷಿಸುತ್ತಿದೆ. ಇದು ಸಮೃದ್ಧಿಗೆ ಒಂದು ಅವಕಾಶವಾಗಿರಬೇಕಾಗಿದ್ದರೂ, ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಗಳು ಇದನ್ನು ಬಿಕ್ಕಟ್ಟಾಗಿ ಪರಿವರ್ತಿಸಿವೆ.
ಕೇಂದ್ರ ಸರ್ಕಾರವು ಮೆಕ್ಕೆಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ ೨,೪೦೦ ರೂ. ಮತ್ತು ಹೆಸರು ಕಾಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ ೮,೭೬೮ ರೂ.ರಂತೆ ಒSP ಘೋಷಿಸಿದ್ದರೂ, ಕರ್ನಾಟಕದಲ್ಲಿ ಪ್ರಸ್ತುತ ಬೆಲೆ ಮೆಕ್ಕೆಜೋಳಕ್ಕೆ ಪ್ರತಿ ಮೆಟ್ರಿಕ್ ಟನ್‌ಗೆ ೧,೬೦೦-೧,೮೦೦ ರೂ. ಮತ್ತು ಹೆಸರು ಕಾಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ ೫,೪೦೦ ರೂ. ಆಗಿದ್ದು, ಇದು ತೀವ್ರ ಮತ್ತು ಆಘಾತಕಾರಿ ಕುಸಿತವಾಗಿದೆ. ಕರ್ನಾಟಕದಲ್ಲಿ ಪ್ರಸ್ತುತ ಮಾರಾಟವಾಗಲು ಅಂದಾಜು ೩೨ ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಮೆಕ್ಕೆಜೋಳ ಲಭ್ಯವಿದೆ. ಆದ್ದರಿಂದ, ಭಾರತ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ಈ ಕೆಳಗಿನಂತೆ, ದರ ನಿಗದಿ ಮಾಡುವಂತೆ ವಿನಂತಿ ಮಾಡಲಾಗಿದೆ.
ಮೆಕ್ಕೆಜೋಳದ ಆಮದಿನ ಮೇಲೆ ನಿರ್ಬಂಧ ಹೇರಿರುವುದು
ಈ ಕುಸಿತಕ್ಕೆ ಪ್ರಮುಖ ಕಾರಣವಾಗಿದ್ದು, ಕಳೆದ ವರ್ಷ ಮ್ಯಾನ್ಮಾರ್, ಉಕ್ರೇನ್ ಮತ್ತು ಇತರ ರಾಷ್ಟ್ರಗಳಿಂದ ದೊಡ್ಡ ಪ್ರಮಾಣದ ಮೆಕ್ಕೆಜೋಳದ ಆಮದು. ಅಂತಹ ಆಮದುಗಳು ದೇಶೀಯ ಬೆಲೆಗಳನ್ನು ಕುಗ್ಗಿಸಿವೆ ಮತ್ತು ರೈತರ ನ್ಯಾಯಯುತ ಆದಾಯಕ್ಕೆ ಹಾನಿ ಮಾಡಿವೆ. ವಿಶ್ವದ ಅತ್ಯುತ್ತಮ ಮೆಕ್ಕೆಜೋಳವನ್ನು ಉತ್ಪಾದಿಸುವ ಭಾರತೀಯ ರೈತರನ್ನು ಬಲವಂತದ ಸಂಕಷ್ಟ ಮಾರಾಟಕ್ಕೆ ತಳ್ಳದಂತೆ, ಮೆಕ್ಕೆಜೋಳದ ಆಮದುಗಳನ್ನು ತಕ್ಷಣವೇ ತಡೆಹಿಡಿಯಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.





