ಬೆಂಗಳೂರು: ಶಾಸಕರು ದೆಹಲಿಗೆ ಹೋಗಿ ತಮ್ಮ ಅಭಿಪ್ರಾಯ ಹೇಳಲು ಸ್ವತಂತ್ರರಿದ್ದಾರೆ. ಆದರೆ ಹೈಕಮಂಡ್ ಸೂಕ್ತ ನಿರ್ಧಾರ ತೆಗೆದುಕೊಂಡು ರಾಜಕೀಯ ಗೊಂದಲಗಳಿಗೆ ಕೊನೆ ಆಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಡಿ.ಕೆ.ಶಿವಕುಮಾರ್ ಬಣದ ಕೆಲ ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಶಾಸಕರಿಗೆ ಸ್ವಾತಂತ್ರ್ಯ ಇದೆ. ಅವರು ಏನು ಅಭಿಪ್ರಾಯ ನೀಡುತ್ತಾರೆ ಎಂದು ನೋಡುತ್ತೇವೆ. ಶಾಸಕರಿಗೆ ಏನು ಹೇಳಬೇಕೆಂದಿದೆಯೋ ಅದನ್ನು ಹೇಳಲಿ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು. ಪಕ್ಷದ ವರಿಷ್ಠರು ಹೇಳಿದಂತೆ ನಾವು ಕೇಳುತ್ತೇವೆ ಎಂದರು.
ಇದನ್ನು ಓದಿ: ರಾಜ್ಯ ಕಾಂಗ್ರೆಸ್‌ನಲ್ಲಿ ನಂಬರ್ ಗೇಮ್ ನಡೆಯುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಹೈಕಮಾಂಡ್ ಈ ಎಲ್ಲಾ ಗೊಂದಲಗಳಿಗೆ ಪೂರ್ಣ ವಿರಾಮ ನೀಡುವುದು ಅಗತ್ಯ ಎಂದು ಪ್ರತಿಪಾದಿಸಿದರು. ಸಚಿವ ಸಂಪುಟ ಪುನರ್‌ರಚನೆಯೂ ಕೂಡ ಹೈಕಮಾಂಡ್ ಅನುಮತಿಸಿದ ಬಳಿಕವೇ ನಡೆಯಲಿದೆ. ಮತ್ತೊಮ್ಮೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ತಾವು ಭೇಟಿ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.





