ಮೈಸೂರು : ಚಾಮುಂಡಿ ಬೆಟ್ಟದಲ್ಲಿರುವ ಏಕಶಿಲೆಯ ಬೃಹತ್ ನಂದಿ ಮೂರ್ತಿಗೆ ಕಾರ್ತಿಕ ಮಾಸದ ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಮಹಾಭಿಷೇಕ ಅದ್ಧೂರಿಯಾಗಿ ನೆರವೇರಿಸಲಾಯಿತು.
ಮಹಾಭಿಷೇಕದ ಬಣ್ಣಗಳಲ್ಲಿ ಮಿಂದೆದ್ದ ನಂದಿಯನ್ನು ಚಾಮುಂಡಿ ಬೆಟ್ಟದ ಗ್ರಾಮಸ್ಥರು ಹಾಗೂ ನೂರಾರು ಭಕ್ತರು ಕಣ್ತುಂಬಿಕೊಂಡರು. ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಮಹಾಭಿಷೇಕಕ್ಕೆ ಬೆಳಿಗ್ಗೆ ೧೦.೦೧ಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥಾನಂದ ಸ್ವಾಮೀಜಿ ಹಾಗೂ ಹೊಸಮಠದ ಚಿದಾನಂದ ಸ್ವಾಮೀಜಿ ಚಾಲನೆ ನೀಡಿದರು.
ಇದನ್ನು ಓದಿ : ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಭೂಮಿ ಪೂಜೆ
ನಾದಸ್ವರ ಹಾಗೂ ಲಿಂಗಽರರ ‘ವೀರಭದ್ರೇಶ್ವರ ಕುಣಿತ’ದೊಂದಿಗೆ ಸ್ವಾಮೀಜಿಗಳನ್ನು ಬರಮಾಡಿಕೊಳ್ಳಲಾಯಿತು. ಪಂಚ ಕಲಶಕ್ಕೆ ಪೂಜೆ ಸಲ್ಲಿಸಿದ ನಂತರ ನಂದಿಯ ಅಂಗಳದಲ್ಲಿ ಬಿಲ್ವಪತ್ರೆ ಗಿಡ ನೆಡಲಾಯಿತು. ನಂದಿಯ ಮೇಲ್ಬಾಗದಲ್ಲಿ ಮಾಡಿದ್ದ ಅಟ್ಟಣಿಗೆಯ ಮೇಲೆ ನಿಂತು ೩೮ ವಿವಿಧ ಬಗೆಯ ಅಭಿಷೇಕಗಳನ್ನು ನಂದಿಯ ಮಸ್ತಕಕ್ಕೆ ಸ್ವಾಮೀಜಿಗಳು ಧಾರೆ ಎರೆದರು. ಪಾದ್ಯಂ, ಅರ್ಘ್ಯ, ಆಚಮನದ ನಂತರ ಪಂಚಾಮೃತಾಭಿಷೇಕ, ಫಲ ಪೂಜಾಮೃತ, ರಸಪಂಚಾಮೃತ, ಪಿಷ್ಟ ಪಂಚಕಾಭಿಷೇಕ, ಗಂಧ ಪಂಚಕಾಭಿಷೇಕ ನಡೆದವು.
ಹಾಲು, ಮೊಸರು, ತುಪ್ಪ, ಜೇನು ತುಪ್ಪ, ಸಕ್ಕರೆ, ಕದಳಿ, ದ್ರಾಕ್ಷಿ, ಬೇಲ, ಖರ್ಜೂರ, ಸೌತೆಕಾಯಿ, ಎಳನೀರು, ಕಬ್ಬಿನ ಹಾಲು, ನಿಂಬೆ, ಎಳ್ಳೆಣ್ಣೆ, ಪಾಯಸ, ಗೋಽ, ಕಡಲೆ, ಹೆಸರು ಹಿಟ್ಟು, ದರ್ಬೆ, ಪತ್ರೆ, ಕೇಸರಿ ಹಾಗೂ ಪುಷ್ಪ ಸೇರಿದಂತೆ ವಿವಿಧ ಬಗೆಯ ದ್ರವ್ಯಗಳ ಅಭಿಷೇಕವನ್ನು ನಂದಿಗೆ ಎರೆಯಲಾಯಿತು. ಒಂದೊಂದು ಅಭಿಷೇಕದಲ್ಲೂ ವಿವಿಧ ಬಣ್ಣಗಳಲ್ಲಿ ನಂದಿ ಮೂರ್ತಿ ಕಂಗೊಳಿಸಿತು.
ಕನಕ ಅಭಿಷೇಕ, ಪಂಚಾಮೃತ, ಶಾಲ್ಯಾನ್ನ, ಸುಗಂಧ ದ್ರವ್ಯ ಅಭಿಷೇಕ ಮತ್ತು ಪಂಚ ಕಲಶ ವಿಸರ್ಜನೆಯೊಂದಿಗೆ ಅಭಿಷೇಕ ಸಂಪನ್ನಗೊಂಡಿತು. ಅಷ್ಟೋತ್ತರ, ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಒಂದೂವರೆ ತಾಸು ನಡೆದ ಅಭಿಷೇಕ ಕಣ್ತುಂಬಿಕೊಂಡ ಜನರು ಭಕ್ತಿಭಾವ ಮೆರೆದರು.
ಬಳಗದ ಅಧ್ಯಕ್ಷ ಎಸ್.ಪ್ರಕಾಶನ್, ಕಾರ್ಯದರ್ಶಿ ಎನ್.ಗೋವಿಂದ, ಖಜಾಂಚಿ ಶಂಕರ್ ಸೇರಿದಂತೆ ಸದಸ್ಯರು ಪಾಲ್ಗೊಂಡರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.





