ಎಸ್. ನಾರಾಯಣ್ ನಿರ್ದೇಶನದ, ‘ದುನಿಯಾ’ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಮಾರುತ’ ಚಿತ್ರವು ಅಕ್ಟೋಬರ್ 31ರಂದು ಬಿಡುಗಡೆ ಆಗಬೇಕಿತ್ತು. ಇದೀಗ ಚಿತ್ರವು ಮೂರು ವಾರ ಮುಂದಕ್ಕೆ ಹೋಗಿದೆ.
ರಿಷಭ್ ಶೆಟ್ಟಿ ಅಭಿನಯದ ‘ಕಾಂತರ – ಚಾಪ್ಟರ್ 1’ ಚಿತ್ರವು ಎರಡು ವಾರಗಳ ಹಿಂದೆ ಬಿಡುಗಡೆಯಾಗಿ, ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ರಾಜ್ಯದ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಗಳ ಅಭಾವವಿರುವ ಕಾರಣ ಚಿತ್ರತಂಡವು ‘ಮಾರುತ’ ಚಿತ್ರದ ಬಿಡುಗಡೆಯನ್ನು ಮೂರು ವಾರ ಮುಂದೂಡಿದೆ. ಅ.31ರ ಬದಲು ಚಿತ್ರವು ಇದೀಗ ನವೆಂಬರ್ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲೊಂದು ಗಂಭೀರ ಸಂದೇಶವನ್ನು ನಾರಾಯಣ್ ಹೇಳುವ ಪ್ರಯತ್ನ ಮಾಡಿದ್ದಾರಂತೆ. ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ ಎಂದು ನಾರಾಯಣ್ ಇತ್ತೀಚೆಗೆ ಈ ಚಿತ್ರದ ಕುರಿತು ಹೇಳಿಕೊಂಡಿದ್ದರು.
ಈಶ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ. ಮಂಜು ಮತ್ತು ರಮೇಶ್ ಯಾದವ್ ನಿರ್ಮಿಸಿರುವ ‘ಮಾರುತ’ ಚಿತ್ರಕ್ಕೆ ಎಸ್. ನಾರಾಯಣ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿ ಸಂಗೀತವನ್ನೂ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಶ್ರೇಯಸ್ ಮಂಜು, ಬೃಂದಾ ಆಚಾರ್ಯ, ತಾರಾ, ರಂಗಾಯಣ ರಘು, ಸಾಧು ಕೋಕಿಲ, ಕಲ್ಯಾಣಿ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಸುಜಯ್ ಶಾಸ್ತ್ರಿ ಮುಂತಾದವರ ಜೊತೆಗೆ ರವಿಚಂದ್‍ರನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.





