ಮೈಸೂರು : ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್) ಅಧ್ಯಕ್ಷ ಸ್ಥಾನಕ್ಕೆ ಆರ್.ಚೆಲುವರಾಜು ರಾಜೀನಾಮೆ ನೀಡಿದ್ದಾರೆ.
ಅಧಿಕಾರ ಹಂಚಿಕೆಯ ಒಪ್ಪಂದದಂತೆ ಹೈಕಮಾಂಡ್ ನಿರ್ದೇಶನದ ಮೇರೆಗೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ. ವಾಪಸ್ ಪಡೆಯಲು ಹದಿನೈದು ದಿನಗಳ ಸಮಯವಿದೆ. ಕಳೆದ ಎರಡು ತಿಂಗಳಿನಿಂದ ರಾಜೀನಾಮೆ ವಿಚಾರದಲ್ಲಿ ನಡೆಯುತ್ತಿದ್ದ ಆಂತರಿಕ ಮುಸುಕಿನ ಗುದ್ದಾಟಕ್ಕೂ ಬ್ರೇಕ್ ಬಿದ್ದಿದೆ.
ಮೈಮುಲ್‌ನ ಐದು ವರ್ಷಗಳ ಆಡಳಿತಮಂಡಳಿಯ ಚುನಾವಣೆ ನಡೆದು ಮೊದಲಿಗೆ ಪಿರಿಯಾಪಟ್ಟಣ ಕ್ಷೇತ್ರದ ಮಾಜಿ ಶಾಸಕ ಕೆ.ಮಹದೇವ ಪುತ್ರ ಪಿ.ಎಂ. ಪ್ರಸನ್ನ ಆಯ್ಕೆಯಾಗಿದ್ದರು. ನಂತರ, ತಮಗೆ ಮುಕ್ತವಾಗಿ ಕೆಲಸ ಮಾಡಲು ಸಚಿವರೊಬ್ಬರು ಅವಕಾಶ ಕೊಡದೆ ಕಿರುಕುಳ ನೀಡುತ್ತಿದ್ದಾರೆಂದು ರಾಜೀನಾಮೆ ನೀಡಿದ್ದರು. ನಂತರ, 2024 ಆಗಸ್ಟ್ ತಿಂಗಳ 8 ರಂದು ನಡೆದ ಚುನಾವಣೆಯಲ್ಲಿ ತಿ.ನರಸೀಪುರ ತಾಲ್ಲೂಕಿನ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ಆರ್.ಚೆಲುವರಾಜು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೀಗ ಪಕ್ಷದ ಒಳಗೆ ನಡೆದ ಅಽಕಾರ ಹಂಚಿಕೆ ಪ್ರಕಾರ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಉಳಿದ ಅವಧಿಗೆ ಎಚ್.ಡಿ.ಕೋಟೆ ತಾಲ್ಲೂಕಿನ ಈರೇಗೌಡ ಅವರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಎರಡು ತಿಂಗಳಿಂದ ಅಧ್ಯಕ್ಷ ಆರ್.ಚೆಲುವರಾಜು ಅವರಿಂದ ರಾಜೀನಾಮೆ ಕೊಡಿಸುವಂತೆ ಆಕಾಂಕ್ಷಿ ಈರೇಗೌಡ ಸೇರಿದಂತೆ ಕಾಂಗ್ರೆಸ್ ಶಾಸಕರು ಒತ್ತಡ ಹೇರಿದ್ದರು. ಬಳಿಕ, ಎರಡು ತಿಂಗಳ ಸಮಯ ಪಡೆದಿದ್ದ ಚೆಲುವರಾಜು ಕೊನೆಗೂ ರಾಜೀನಾಮೆ ಕೊಟ್ಟಿದ್ದಾರೆ.





