ಎಸ್.ಕುಮಾರ್
ಶ್ರೀರಂಗಪಟ್ಟಣದ: ಪಟ್ಟಣದಲ್ಲಿ ಸಾವಿಗೀಡಾದವರ ಅಂತ್ಯಕ್ರಿಯೆ ನೆರವೇರಿಸಲು ಇರುವ ಶಂಭುಲಿಂಗಯ್ಯನ ಕಟ್ಟೆ ಸ್ಮಶಾನ ಅವ್ಯವಸ್ಥೆಯಿಂದ ಕೂಡಿದ್ದು, ಗಬ್ಬು ನಾರುತ್ತಿದೆ. ಎಲ್ಲೆಂದರಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಪುಂಡ ಪೋಕರಿಗಳು ಈ ಜಾಗವನ್ನು ಮೋಜು ಮಸ್ತಿಯ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಮದ್ಯ, ಗಾಂಜಾ ಸೇವನೆ, ಇಸ್ಪೀಟ್ ಆಡಲು ಈ ಸ್ಥಳವನ್ನು ಅಡ್ಡೆಯನ್ನಾಗಿ ಮಾಡಿ ಕೊಂಡಿದ್ದಾರೆ.
ರಂಗನಾಥ ನಗರದ ಕೆಲವು ನಿವಾಸಿಗಳು ಕಸವನ್ನು ತಂದು ಇಲ್ಲಿಯೇ ಬಿಸಾಡುತ್ತಾರೆ. ಸಿಕ್ಕ ಸಿಕ್ಕಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಿ ಕೆಲವರು ಈ ಸ್ಥಳ ಗಬ್ಬೆದ್ದು ನಾರುವಂತೆ ಮಾಡಿದ್ದಾರೆ. ಅಂತ್ಯಕ್ರಿಯೆಗೆ ಹೊರಗಿನಿಂದ ಬರುವವರು ಹಾಗೂ ಸ್ಥಳೀಯರು ಇಲ್ಲಿ ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ ಉದ್ಭವವಾಗಿದೆ. ಮೂಗು ಮುಚ್ಚಿಕೊಂಡು ಅಂತ್ಯಕ್ರಿಯೆಯಲ್ಲಿ ಭಾಗಿ ಗಳಾಗಬೇಕಾದ ಮುಜುಗರದ ವಾತಾವರಣ ಸೃಷ್ಟಿಯಾಗಿದೆ.
ಅಂತ್ಯಕ್ರಿಯೆಗೆ ಬರು ವವರು ವಿಶ್ರಾಂತಿ ಪಡೆಯಲು ಕೂರುವ ಸ್ಥಳಗಳ ಚಾವಣಿ ಕಳಚಿ ಬೀಳುವ ಹಂತ ತಲುಪಿವೆ. ಚಾವಣಿಯ ಶೀಟುಗಳು ಒಡೆದು ಚೂರಾಗಿದ್ದು, ಮಳೆ ಬಂದರೆ ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಾಗಿ ಜನರು ಪ್ರಾಣ ಭಯದಿಂದ ಇಲ್ಲಿ ನಿಲ್ಲಲು ಹಿಂಜರಿಯುತ್ತಿದ್ದಾರೆ. ಪುಂಡು ಪೋಕರಿಗಳು ಸ್ಮಶಾನದಲ್ಲಿ ಮಧ್ಯಪಾನ ಮಾಡಿ, ಮದ್ಯದ ಬಾಟಲಿಗಳನ್ನು ಹೊಡೆದು ಹಾಕುವುದರಿಂದ ಜನರು ಸಂಚರಿಸುವ ದಾರಿಯಲ್ಲಿ ಗಾಜಿನ ಚೂರುಗಳು ಚೆಲ್ಲಿಕೊಂಡಿದ್ದು ಇಲ್ಲಿ ಸಂಚರಿಸಲೂ ಆಗುತ್ತಿಲ್ಲ, ಅಲ್ಲದೆ, ಎಲ್ಲೆಂದರಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿದ್ದು, ಅಂತ್ಯಕ್ರಿಯೆ ನೆರವೇರಿಸಲೂ ಕಷ್ಟವಾಗುತ್ತಿದೆ.
ಇಲ್ಲಿನ ಅವಸ್ಥೆಯನ್ನು ಕಂಡೂ ಕಾಣದಂತಿರುವ ಪುರಸಭೆ ಅಽಕಾರಿಗಳು ಹಾಗೂ ಜನ ಪ್ರತಿನಿಧಿಗಳು ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಸ್ಮಶಾನವನ್ನು ಅಭಿವೃದ್ಧಿಪಡಿಸಬೇಕೆಂದು ಪಟ್ಟಣದ ನಾಗರಿಕರು ಆಗ್ರಹಿಸಿದ್ದಾರೆ.





