ಪರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆಯಾಗುವ ಸಂದರ್ಭದಲ್ಲಿ ಸಾಮಾನ್ಯವಾಗಿ ಚರ್ಚೆಯಾಗುತ್ತಿದ್ದ ಏಕರೂಪ ಟಿಕೆಟ್ ದರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಮುಂತಾದವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ಟಿಕೆಟ್ ದರ ಕಡಿಮೆ ಮಾಡುವುದಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗಿದೆ.
ಪರಭಾಷೆಯ ಚಿತ್ರಗಳ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ದುಬಾರಿ ಬೆಲೆ ನಿಗದಿಪಡಿಸಲಾಗುತ್ತಿದೆ. ರಜನಿಕಾಂತ್, ಪ್ರಭಾಸ್, ವಿಜಯ್ ಮುಂತಾದ ಸ್ಟಾರ್ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗುವ ಸಂದರ್ಭದಲ್ಲಿ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆ ವಿಪರೀತ ಏರಿಸಲಾಗುತ್ತದೆ. ಬೇರೆ ರಾಜ್ಯಗಳಲ್ಲಿ ಟಿಕೆಟ್ ಬೆಲೆ ಗರಿಷ್ಠ 150ರಿಂದ 200 ರೂಗಳವರೆಗೆ ಇದ್ದರೆ, ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಟಿಕೆಟ್ ದರ 1500 ರೂ.ವರೆಗೂ ಏರಿಸಲಾಗುತ್ತಿದೆ.
ಈ ಕುರಿತು ಕಳೆದ ಒಂದು ದಶಕದಿಂದ ಚರ್ಚೆ ನಡೆಸಲಾಗಿದೆ. ಸಿದ್ದರಾಮಯ್ಯ ಅವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೇ ಈ ಏಕರೂಪ ಟಿಕೆಟ್ ಬೆಲೆ ಬಗ್ಗೆ ಚಿತ್ರರಂಗ ಗಮನಸೆಳೆದಿತ್ತು. ಮುಖ್ಯಮಂತ್ರಿಗಳು ಸಹ 200 ರೂ. ಟಿಕೆಟ್ ನಿಗದಿ ಮಾಡಿ ಆದೇಶ ಹೊರಡಿಸಿದ್ದರು. ಆದರೆ, ಈ ಆದೇಶ ಗೃಹ ಇಲಾಖೆಯಿಂದ ಬರುವ ಬದಲು ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದಿಂದ ಬಂದಿತ್ತು. ಈ ಸಂಬಂಧ ಚಿತ್ರಮಂದಿರಗಳ ಮಾಲೀಕರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದರು. ಆ ನಂತರ ಕೆಲವು ವರ್ಷಗಳ ಈ ವಿಷಯ ನೆನೆಗುದಿಗೆ ಬಿದ್ದಿತ್ತು. ಈಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುವುದರಿಂದ ಮತ್ತೊಮ್ಮೆ ವಿಷಯ ಮುನ್ನೆಲೆಗೆ ಬಂದಿದೆ. ಈ ಹಿಂದೆ ಆಗಿರುವ ತಪ್ಪನ್ನು ಸರಿಪಡಿಸಿ, ಗೃಹ ಇಲಾಖೆಯಿಂದಲೇ ಆದೇಶ ಹೊರಡಿಸುವಂತೆ ಮನವಿ ಮಾಡಲಾಗಿದೆ. ಅಷ್ಟೇ ಅಲ್ಲ, ಚಿತ್ರರಂಗದ ಕೆಲವು ಮಂದಿ ಕಳೆದ ಕೆಲವು ದಿನಗಳಿಂದ ವಾಣಿಜ್ಯ ಮಂಡಳಿಯೆದುರು ಕುಳಿತು ಈ ಸಂಬಂಧ ಧರಣಿ ಮಾಡುತ್ತಿದ್ದಾರೆ.
ಈ ಸಂಬಂಧ ನವೆಂಬರ್.15ರ ಗಡುವನ್ನೂ ನೀಡಲಾಗಿದೆ. ನವೆಂಬರ್ 15ರೊಳಗಾಗಿ ಆದೇಶ ಮಾಡದೇ ಹೋದರೆ, ರಾಜ್ಯವ್ಯಾಪಿ ಈ ಕುರಿತು ಹೋರಾಟ ಮಾಡುವುದಾಗಿ ಚಿತ್ರರಂಗದ ಒಂದು ಬಣ ಎಚ್ಚರಿಸಿದೆ. ಈ ಕುರಿತು ಮಾತನಾಡಿರುವ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ‘ರಜನಿಕಾಂತ್ ಅಭಿನಯದ ‘ವೆಟ್ಟಾಯನ್’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ನಲ್ಲಿ ಆರು ಸ್ಕ್ರೀನ್ ಕೊಟ್ಟರೆ, ಕನ್ನಡ ಚಿತ್ರಗಳಿಗೆ ಕೇವಲ ಎರಡು ಸ್ಕ್ರೀನ್‍ಗಳನ್ನು ಮಾತ್ರ ನೀಡಲಾಗಿತ್ತು. ಹಾಗೆಯೇ ಕೆಲವು ಕಡೆ ಮಲ್ಟಿಪ್ಲೆಕ್ಸ್ಗಳಲ್ಲಿ 1500 ರೂ. ವರೆಗೂ ಟಿಕೆಟ್ ಬೆಲೆ ನಿಗದಿಪಡಿಸಲಾಗಿತ್ತು. ಇದು ತಕ್ಷಣವೇ ನಿಲ್ಲಬೇಕು. ಪರಭಾಷೆಯ ದೊಡ್ಡ ಸ್ಟಾರ್‌ಗಳ ಚಿತ್ರಗಳ ಟಿಕೆಟ್ ಬೆಲೆ ಹೆಚ್ಚು ಮಾಡಿದರೆ ಇನ್ನು ಮುಂದೆ ಸುಮ್ಮನಿರುವುದಿಲ್ಲ. ನವೆಂಬರ್ 15ರೊಳಗೆ ಆದೇಶ ಮಾಡದಿದ್ದರೆ, ‘ಪುಷ್ಪ 2’ ಚಿತ್ರಕ್ಕೆ 200 ರೂ.ಗಳಿಗಿಂತ ಜಾಸ್ತಿ ದರ ಇಟ್ಟರೆ, ಚಿತ್ರಮಂದಿರರಗಳಿಗೆ ಮುತ್ತಿಗೆ ಹಾಕಲಾಗುತ್ತದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.





