ಮಂಡ್ಯ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15 ರಂದು ನಿಡಘಟ್ಟದಿಂದ ಸಿದ್ದಲಿಂಗಪುರದವರೆಗೆ ಜಿಲ್ಲೆಯ ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣದ 3 ತಾಲ್ಲೂಕುಗಳ ಒಟ್ಟು 62 ಕಿ.ಮೀಟರ್ ಮಾನವ ಸರಪಳಿ ರಚಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಾಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮಾನವ ಸರಪಳಿ ರಚಿಸಲು 17 ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಪ್ರತಿ ಒಂದು ಕಿ.ಮೀಟರ್ ಗೆ ಒಟ್ಟು 62 ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ವಲಯ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದರು.
ಪ್ರತಿ ಒಂದು ಕಿ.ಮೀಟರ್ ಗೆ 1000 ಜನರು/ ವಿದ್ಯಾರ್ಥಿಗಳು ಬೇಕಿದ್ದು, ಇವರನ್ನು ಸಂಘಟಿಸಿ ವ್ಯಕ್ತಿವಾರು ಸೆ.15 ರಂದು ಭಾಗವಹಿಸುವವರ ಪಟ್ಟಿ ಸಿದ್ಧಪಡಿಸಬೇಕು. ಯಾವುದೇ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ನಿಡಘಟ್ಟದಲ್ಲಿ ಸರಪಳಿ ಪ್ರಾರಂಭವಾಗುವ ಸ್ಥಳದಲ್ಲಿ ನಾಲ್ಕು ಕಲಾತಂಡಗಳು ಹಾಗೂ ಶಾಲಾ ಬ್ಯಾಂಡ್ ತಂಡಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಬೇಕು. ಶಿಕ್ಷಣ ಇಲಾಖೆಯವರು ಬ್ಯಾಂಡ್ ತಂಡಗಳಿಗೆ ತರಬೇತಿ ನೀಡಿ ಕಾರ್ಯಕ್ರಮ ಸಜ್ಜುಗೊಳಿಸಬೇಕು ಎಂದರು.
ಸರಪಳಿ ರಚನೆಯಲ್ಲಿ ಭಾಗವಹಿಸುವ ಮಕ್ಕಳನ್ನು ಅವರಿಗೆ ನಿಗದಿಪಡಿಸುವ ಸ್ಥಳಕ್ಕೆ ದೂರವಿದ್ದಲ್ಲಿ ವಾಹನದ ವ್ಯವಸ್ಥೆ ಮಾಡಬೇಕು. ಸರ್ವಿಸ್ ರಸ್ತೆಯಲ್ಲಿ ಸರಪಳಿ ರಚಿಸುವುದರಿಂದ ಮಕ್ಕಳು ಹೆದ್ದಾರಿಯಲ್ಲಿ ಓಡಾಡುವುದು, ರಸ್ತೆ ದಾಡುವುದು ಮಾಡದಂತೆ ನೋಡಿಕೊಳ್ಳಬೇಕು. ಇದಕ್ಕೆ ಪೊಲೀಸ್ ಇಲಾಖೆಯಿಂದ ಅಲ್ಲಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ವಲಯ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ತಮಗೆ ನಿಗದಿಪಡಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಹಾಗೂ ಸ್ಥಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು/ ಸಾರ್ವಜನಿಕರ ಹೆಸರಿನ ಪಟ್ಟಿಯನ್ನು ಸೆಪ್ಟೆಂಬರ್ 11 ರೊಳಗಾಗಿ ಸಿದ್ಧಪಡಿಸಿಕೊಂಡು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಂಜೀವಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷರಾ ಮಣಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮೇಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಮೂರ್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.