ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರವೇನಿಲ್ಲ. ಹೈಕಮಾಂಡ್ ಸಿಎಂ ಅವರ ಬೆಂಬಲಕ್ಕೆ ನಿಂತಿದೆ. ನಮ್ಮ ಪಕ್ಷದಲ್ಲಿ ನಾಯಕತ್ವದ ಬದಲಾವಣೆಯ ಪ್ರಶ್ನೆ ಎಲ್ಲಿಂದ ಬಂತು? ಬಿಜೆಪಿ-ಜೆಡಿಎಸ್ ಷಡ್ಯಂತ್ರ ಮುಗಿಸಲು ನಾವು ಒಗ್ಗಟ್ಟಾಗಿ ನಿಂತಿದ್ದೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಹೇಳಿದರು.
ಈ ಸಂಬಂಧ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಯಾವುದೇ ಹುರುಳಿಲ್ಲ. ಈ ಬಗ್ಗೆ ಸಾಕಷ್ಟು ಕಾನೂನು ತಜ್ಞರು ಇದನ್ನೇ ಹೇಳಿದ್ದಾರೆ ಎಂದು ತಿಳಿಸಿದರು.
ಇನ್ನು ಈ ಪ್ರಕರಣ ಸಂಬಂಧ ಹೈಕಮಾಂಡ್‌ಗೆ ಸಿಎಂ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸವಿವಿರವಾಗಿ ವಿವರಿಸಿದ್ದಾರೆ. ಬಿಜೆಪಿ-ಜೆಡಿಎಸ್ ಅವರ ರಾಜಭವನದ ಹುನ್ನಾರ ಹೈಕಮಾಂಡ್‌ಗೆ ತಿಳಿದಿದೆ. ಹಾಗೂ ಅವರ ವಿರುದ್ಧದ ಹೋರಾಟಕ್ಕೆ ಹಿಂಜರಿಯದಂತೆ ನಮಗೆ ಕರೆ ನೀಡಿದ್ದಾರೆ ಎಂದರು.
ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿ. ಸಂವಿಧಾನದ ಮೇಲೆ ಕೆಲಸ ಮಾಡಬೇಕು. ಅದು ಬಿಟ್ಟು ಎಚ್‌ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ಧನಾ ರೆಡ್ಡಿ ಹಾಗೂ ನಿರಾಣಿ ಅವರ ಕೇಸ್‌ಗಲು ಇನ್ನೂ ಬಾಕಿ ಇದೆ. ಅದು ಬಿಟ್ಟು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಬೆಳಿಗ್ಗೆ ದೂರು ಪಡೆದು ಸಂಜೆ ನೋಟಿಸ್ ಹೊರಡಿಸಿದ್ದಾರೆ. ಇದನ್ನ ನೋಡಿದರೇ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.