Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ಇತಿಹಾಸ ಕಾಲದಲ್ಲಿ ಕೊಳ್ಳೇಗಾಲ: ಮಾಂತ್ರಿಕ ತಾಣ ಬಹುಕಾಲ

• ಮಹಾದೇವ ಶಂಕನಪುರ, ಸಾಹಿತಿ, ಕೊಳ್ಳೇಗಾಲ

ಗಂಗರಿಂದ ಟಿಪ್ಪುವರೆಗೆ ಆಳ್ವಿಕೆ ಕಂಡ ಚಾರಿತ್ರಿಕ ಮಹತ್ವ ಪಡೆದ ಪಟ್ಟಣ | ಮಲೆ ಮಹದೇಶ್ವರ, ಮಂಟೇಸ್ವಾಮಿ ಸಾಂಸ್ಕೃತಿಕ ನಾಯಕರನ್ನು ಸೆಳೆದ ತಾಣ

ಮಾಟ ಮಂತ್ರ, ಮೋಡಿ, ಇಂದ್ರಜಾಲ ನಿಗೂಢತೆ: ಕಾಳಮುಖ, ಕಾಪಾಲಿಕ, ನಾಥ ಸಿದ್ಧ, ಶೈವ ಸಿದ್ಧ, ಶಾಕ್ತ ಪಂಥ ಪರಂಪರೆಗಳಿದ್ದವು. ಈ ಶೈವ ಮತ್ತು ಜೈನ ಮುನಿಗಳಲ್ಲಿ ಪೈಪೋಟಿ ಇತ್ತು. ಶೈವರು ತಂತ್ರ ಮಂತ್ರಗಳನ್ನು, ಜೈನರು ಅತಿಮಾನುಷ ಶಕ್ತಿ ಎನಿಸಿದ ಪದ್ಮಾವತಿ, ಜ್ವಾಲಾ ಮಾಲಿನಿಯರಂತಹ ದೇವತೆಗಳ ಆರಾಧನೆ ಮಾಡುತ್ತಿದ್ದರು. ಮಾಟಮಂತ್ರ, ಮೋಡಿ, ಇಂದ್ರಜಾಲ ಮುಂತಾದ ಆಚರಣೆಗಳಿದ್ದವು. ಈ ವಿದ್ಯೆ ಇಂದಿಗೂ ಸೋಲಿಗ ಬುಡಕಟ್ಟು ಜನಾಂಗಗಳಲ್ಲಿ ಹಾಗೂ ಹಲವು ನಗರವಾಸಿಗಳಲ್ಲಿ ನಿಗೂಢವಾಗಿ ಉಳಿದಿದೆ.

• ಎಪ್ಪತ್ತೇಳು ಮಲೆಗಳಲ್ಲಿ ನಡುಮಲೆಯಲ್ಲಿ ನೆಲೆಸುವ ಮಾದೇಶ್ವರ ಮಂಡಿಯೂರಿದ ‘ಮರಡಿಗುಡ್ಡ
• ಗಂಗರು, ಚೋಳರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಒಡೆಯರು, ಹೈದರ್-ಟಿಪ್ಪು ವರೆಗೆ ಆಳ್ವಿಕೆ ಕಂಡ ಈ ಪಟ್ಟಣಕ್ಕೆ ಚಾರಿತ್ರಿಕ ಮಹತ್ವ
• ಭರತಖಂಡ ಸಂಚರಿಸಿ ತನ್ನ ಮಾಂತ್ರಿಕ ಶಕ್ತಿ, ತಾರ್ಕಿಕ ಬುದ್ಧಿಯಿಂದ ಜೈನಧರ್ಮದ ಪ್ರಭಾವಬೀರಿದ ಭದ್ರನೆಂಬ ಜೈನ ಆಚಾರ್ಯನ ತಪೋಭೂಮಿ
• ಭಾನುಕೀರ್ತಿ ಎಂಬ ಶ್ರವಣ ಮುನಿಯ ನೆಲೆವೀಡು
• 2ನೇ ಮಹಾಯುದ್ಧದಲ್ಲಿ ಕೊಳ್ಳೇಗಾಲದ ರೇಷ್ಮೆ ನೂಲು ಬಳಕೆ

ಕೊಳ್ಳೇಗಾಲ ಎಂಬ ಹೆಸರು ಹೇಗೆ ಬಂತು?: ಕೌಹಳ ಮತ್ತು ಗಾಲವ ಎಂಬ ಇಬ್ಬರು ಋಷಿಮುನಿಗಳು ಇಲ್ಲಿ ವಾಸವಿದ್ದರು. ಹಾಗಾಗಿ ಈ ಊರು ‘ಕೌಳಗಾಲ’ ಎಂದು ಹೆಸರಾಯಿತು, ಮುಂದೆ ಅದು ಕೊಳ್ಳೇಗಾಲ ಎಂದಾಯಿತು ಎಂಬುದು ಜನಜನಿತ. ಈ ಇಬ್ಬರೂ ಋಷಿಮುನಿಗಳು ಅಲೆಮಾರಿ ಬೌದ್ಧ ಭಿಕ್ಕುಗಳಾಗಿದ್ದರು. ಇಂದಿನ ಭೀಮನಗರ ಬಡಾವಣೆಯಲ್ಲಿರುವ ಗದ್ದುಗೆಗಳು ಅವರದೇ ಎಂಬ ವಾದವೂ ಇದೆ. ಕೌಳ ಎಂಬುದು ಒಂದು ಶಾಕ್ತ ಪಂಥ, ಇದರಲ್ಲಿ ವಾಮಾಚಾರ, ತಾಂತ್ರಿಕ ಆಚರಣೆಗಳಿದ್ದವು. ಮಹಾಕಾಳಿಯ ಆರಾಧಕರಾದ ಕೌಳರು ಇದ್ದುದರಿಂದ ಇದು ಮಾಟ-ಮಂತ್ರಕ್ಕೆ ಹೆಸರಾಯಿತು ಎಂಬ ಹಿನ್ನೆಲೆಯನ್ನು ಹೇಳಲಾಗಿದೆ.

ಮದ್ರಾಸ್ ಪ್ರಾಂತ್ಯದಿಂದ ಮತ್ತೆ ಮೈಸೂರು ರಾಜ್ಯಕ್ಕೆ: ಕ್ರಿ.ಶ. 1750ರಲ್ಲಿ ನೆಲ್ಲೂರು ಕೋಟೆ, ಗೋಪಿನಾಥಂ ಕೋಟೆ, ಆಲಂಬಾಡಿ ಕೋಟೆ, ಬಂಡಳ್ಳಿ ದುರ್ಗದ ಕೋಟೆ, ಟಿಪ್ಪು ಸುಲ್ತಾನ್ ಅಧೀನದಲ್ಲಿದ್ದವು. ಬಂಡಳ್ಳಿ ದರ್ಗಾ ಟಿಪ್ಪು ಕಾಲದಲ್ಲಿ ಮದ್ದುಗುಂಡುಗಳನ್ನು ಇಡುವ ಸುರಕ್ಷಿತ ಸ್ಥಳ ಎನಿಸಿತ್ತು. ಮುಸ್ಲಿಂ ಅಧೀನಕ್ಕೆ ಹೆದರಿ ಹಿಂದೂ ರಾಜದಂಪತಿ ದರ್ಗಾದ ಮೇಲಿರುವ ಕಲ್ಯಾಣಿಗೆ ತಮ್ಮೆಲ್ಲಾ ಚಿನ್ನಾಭರಣ ಗಳನ್ನು ಹಾಕಿ ಮರಣ ಹೊಂದಿದರು ಎಂಬ ಪ್ರತೀತಿ ಇದೆ. ಟಿಪ್ಪು ಸುಲ್ತಾನ್ ಪತನಾನಂತರ ಕೊಳ್ಳೇಗಾಲ ಬ್ರಿಟಿಷ್ ಅಧಿಪತ್ಯದ ಮದ್ರಾಸ್ ಪ್ರಾಂತ್ಯದ ಕೊಯಮತ್ತೂರು ಜಿಲ್ಲೆಗೆ ಸೇರಿತ್ತು. ಪ್ರಾಂತ್ಯವಾರು ವಿಂಗಡಣೆ ವೇಳೆ 1956ರಲ್ಲಿ ಕೊಳ್ಳೇಗಾಲ ಮೈಸೂರು ರಾಜ್ಯಕ್ಕೆ ಸೇರಿತು.

ಆಗ ಕುಸುಮಾಳ ಕಣ್ಣಳ ಜಲವು ನಿಂತೀತಲ್ಲಾ
ಕೊಳ್ಳೇಗಾಲದ ಮಾಂತ್ರಿಕರು ಓಡೋಡಿ ಬಂದರೋ ಎಂಟನಾ ಅವು ನಾಗಬೆತ್ತದಲ್ಲಿ ಹೊಡೆದಾಗ
ಮುರೀತಲ್ಲೋ ಆ ನಾಗಬೆತ್ತವು
ಆ ಗಾಳಿ ಮಾತಿನ ಅದು ತಾವು ಅವುರ್ಗ ಸಿಕ್ಕಾದೆ ಮುಂದೂಕಾ

ಸಾಹಿತಿ ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕೃತಿಯಲ್ಲಿ ಬರುವ ಈ ಸತ್ವದ ಜಾಡನ್ನು ಹಿಡಿದು ಹೊಂಟರೆ, ಕೊಳ್ಳೇಗಾಲ ಕರ್ನಾಟಕ ರಾಜ್ಯದ ದಕ್ಷಿಣ ಭಾಗದ ಚಾಮರಾಜನಗರ ಗಡಿ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಒಂದು, ಕಾವೇರಿ ನದಿ ತಪ್ಪಲಿನ ಪಟ್ಟಣ.

ಶಿಲಾಯುಗದ ಮಾನವ ವಸತಿ ಸಂಸ್ಕೃತಿಯಿಂದ ಹಿಡಿದು ಗಂಗರು, ಚೋಳರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಒಡೆಯರು, ಹೈದರ್ -ಟಿಪ್ಪುವರೆಗೆ ಈ ಪಟ್ಟಣಕ್ಕೆ ಚಾರಿತ್ರಿಕ ಮಹತ್ವವಿದೆ. ಕೊಳ್ಳೇಗಾಲ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 15 ಶಿಲಾಯುಗ ಮಾನವ ಸಂಸ್ಕೃತಿಯ ನೆಲೆಗಳು ಪತ್ತೆಯಾಗಿರುವುದಾಗಿ ವರದಿಗಳಿವೆ.

ಪಟ್ಟಣದ ಲಕ್ಷ್ಮೀನಾರಾಯಣ ದೇವಾಲಯದ ಮುಂದಿರುವ 11ನೇ ಶತಮಾನದ ಶಾಸನ ವಾಣಿಜ್ಯ ಸಂಘದ ಬಗ್ಗೆ, ದೇವಾಲಯಕ್ಕೆ ದಾನ ನೀಡಿರುವ ಬಗ್ಗೆ ಉಲ್ಲೇಖಿಸುತ್ತದೆ ಹಾಗೂ ಕೊಳ್ಳೇಗಾಲವನ್ನು ‘ತ್ರಿಭುವನ ಮಾದೇವಿ ಚತುರ್ವೇದಿ ಮಂಗಲ’ ಎಂದು ಹೆಸರಿಸುತ್ತದೆ.

ಕೊಳ್ಳೇಗಾಲವು ಮಲೆ ಮಾದೇಶ್ವರ, ಮಂಟೇಸ್ವಾಮಿ ಕುರಿತ ಜನಪದ ಕಾವ್ಯ ಮತ್ತು ನೀಲಗಾರರು ಹಾಗೂ ಕಂಸಾಳೆ- ತಂಬೂರಿ ಕಲೆಗೆ ಹೆಸರುವಾಸಿ. ಎಪ್ಪತ್ತೇಳು ಮಲೆಗಳಲ್ಲಿ ನಡು ಮಲೆಯಲ್ಲಿ ನೆಲೆಸುವ ಮಾದೇಶ್ವರ ಮಂಡಿಯೂರಿದ ‘ಮರಡಿಗುಡ್ಡ ಕೊಳ್ಳೇಗಾಲ ಪಟ್ಟಣದ ಹೃದಯಭಾಗದಲ್ಲಿದೆ. ಕಾವೇರಿ ದಡದಲ್ಲಿ ಕಲ್ಯಾಣ ಕ್ರಾಂತಿಗೆ ಕಾರಣರಾದ ಹರಳಯ್ಯ ನೆಲೆಸಿದ ಅರಳೇ ಗ್ರಾಮ ಕೊಳ್ಳೇಗಾಲಕ್ಕೆ ಹತ್ತಿರ ವಿದೆ. ಪಕ್ಕದ ಬಸ್ತಿಪುರ ತಲಕಾಡಿನ ಗಂಗರ ಕಾಲದ ಜೈನ ಬಸದಿಗಳ ಕೇಂದ್ರವಾಗಿತ್ತು. ಗಂಗರ ಕಾಲದ ಪೂಜ್ಯಪಾದರು ನೆಲೆಸಿದ್ದುದು ಇದೇ ಕೊಳ್ಳೇಗಾಲ ಮತ್ತು ಬಸದೀಪುರಗಳಲ್ಲಿ ಎಂಬ ಮಾಹಿತಿ ಇದೆ. ಪೂಜ್ಯಪಾದರ ಸೋದರಳಿಯ ನಾಗಾರ್ಜುನ ಮುಡಿಗುಂಡದ ನಿವಾಸಿ. ಈ ಇಬ್ಬರು ಜೈನ ವಿದ್ವಾಂಸರು ಹಾಗೂ ರಸಸಿದ್ಧಿ ಪಾರಂಗತರು ಎಂದು ದೇವಚಂದ್ರನ ರಾಜಾವಳಿ ಕಥೆ ಹೇಳುತ್ತದೆ.

ಕೊಳ್ಳೇಗಾಲದ ಅನತಿ ದೂರದಲ್ಲಿರುವ ಕುರುಬನಕಟ್ಟೆ ಮಂಟೇಸ್ವಾಮಿ ಅವರ ಶಿಷ್ಯರಾದ ಮಾದಾರ ಚೆನ್ನಯ್ಯ, ಲಿಂಗಯ್ಯನವರ ಐಕ್ಯ ಸ್ಥಳ, ಕಪ್ಪಡಿ, ಬೊಪ್ಪಗೌಡನಪುರ, ಚಿಕ್ಕಲ್ಲೂರಿನಷ್ಟೇ ಕುರುಬನಕಟ್ಟೆಯೂ ಪ್ರಮುಖ ನೀಲಗಾರರ ಕ್ಷೇತ್ರ, ಮಾದಾರ ಚೆನ್ನಯ್ಯ, ಲಿಂಗಯ್ಯ ಅವರ ನೆಲೆ ಕೂಡ ಎಂಬ ಮಾಹಿತಿಗಳಿವೆ. ಇದೇ ಸರಹದ್ದಿನ ಮದುಮಲೆ ಗವಿಬೆಟ್ಟ ಉರಿಲಿಂಗ ಪೆದ್ದಿಯವರ ಸಂಸ್ಕೃತಿಯನ್ನು ಹೊಂದಿದೆ. ಸಮೀಪದ ಹೊಂಡರಬಾಳು ಮರುಳಸಿದ್ಧನ
ಕೃತಿಯ ಸಿದ್ದಪ್ಪನ ಬೆಟ್ಟ ಎನಿಸಿದೆ.

ಚಾರಿತ್ರಿಕವಾಗಿ ನೋಡಿ ದರೆ ಜೈನಧರ್ಮ ಇಲ್ಲಿ ಪ್ರಬಲವಾಗಿತ್ತು. ಕುಂತೂ ರಿನ ಶಾಸನ 10ರಲ್ಲಿ, ಬಸ ದೀಪುರ ಶಾಸನ 91-92 ರಲ್ಲಿ ಈ ಬಗ್ಗೆ ಉಲ್ಲೇಖಗಳಿವೆ. ಕೊಳ್ಳೇಗಾಲದ ಉತ್ತರಕ್ಕಿರುವ ಧನಗೆರೆ ಹತ್ತಿರ ಬಸದಿಯ ಅವ ಶೇಷವು ಕಂಡು ಬಂದಿದೆ, ಐದಾರು ಜೈನ ಮೂರ್ತಿಗಳು ಸಿಕ್ಕಿವೆ. ದೂರದ ಮಣ ಗಳ್ಳಿಯು ಸಮಂತ ಭದ್ರನೆಂಬ ಜೈನ ಆಚಾರ್ಯನ ತಪೋಭೂಮಿ, ಕ್ರಿ.ಶ.400ರಲ್ಲಿದ್ದ ಇವನು ಇಡೀ ಭರತಖಂಡ ಸಂಚರಿಸಿ ತನ್ನ ಮಾಂತ್ರಿಕ ಶಕ್ತಿ, ತಾರ್ಕಿಕ ಬುದ್ಧಿಯಿಂದ ಜೈನಧರ್ಮದ ಪ್ರಭಾವಬೀರಿದ. ಭಾನುಕೀರ್ತಿ ಎಂಬ ಶ್ರವಣ ಮುನಿ ‘ಶ್ರವಣ ಬೋಳಿಯಲ್ಲಿ ಅರಮನೆ ಕಟ್ಟಿ ಶೈವ ರನ್ನು ಸೆರೆಯಲ್ಲಿಟ್ಟಿದ್ದನು. ಇದೇ ವಿಚಾರ ಮಲೆಮಾದೇಶ್ವರ ಕಾವ್ಯದಲ್ಲಿ ಶ್ರವಣದೊರೆ ಸಂಹಾರದ ಕಥೆಯಾಗಿದೆ.

ಪ್ರಸ್ತುತ ಕೊಳ್ಳೇಗಾಲ ಒಂದು ವಾಣಿಜ್ಯ ಕೇಂದ್ರ, ಚಿನ್ನ-ಬೆಳ್ಳಿ ಜವಳಿ ವ್ಯಾಪಾರಕ್ಕೆ ಪ್ರಸಿದ್ದಿ. ಒಂದು ಕಾಲಕ್ಕೆ ರೇಷ್ಮೆ ಕೃಷಿ ಮುಖ್ಯ ಕಸುಬಾಗಿತ್ತು, ಕೊಳ್ಳೇಗಾಲದ ರೇಷ್ಮೆ ನೂಲು 2ನೇ ಮಹಾ ಬಳಕೆ ಯುದ್ಧದಲ್ಲಿ ಯಾಗಿದೆ. ಒಂದು ಅವಧಿಯಲ್ಲಿ ಇದ್ದಂತಹ ಭಾಷಾ ಮತ್ತು ಧಾರ್ಮಿಕ ಸಂಘರ್ಷ ಈಗ ಇಲ್ಲವಾಗಿದೆ. ಕನ್ನಡ-ತಮಿಳು, ಹಿಂದೂ-ಮುಸ್ಲಿಂ, ವೈಮನಸ್ಯ ಕಡಿಮೆ ಯಾಗಿದೆ, ಭಾಷೆ ಮತ್ತು ಧಾರ್ಮಿಕ ಸಾಮರಸ್ಯ ಇಂದು ಸಾಧ್ಯವಾಗಿದೆ ಹಿಂದೂ-ಮುಸ್ಲಿಂ-ಕ್ರೈಸ್ತ, ಎಸ್‌ಸಿ, ಎಸ್‌ಟಿ ಹಿಂದುಳಿದ ವರ್ಗದ ಎಲ್ಲಾ ಜನರು ಭಾಷೆ, ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳ ನಡುವೆ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ.

ಹೀಗಾಗಿ ಕೊಳ್ಳೇಗಾಲ ಪಟ್ಟಣ ಇತಿಹಾಸ ಸಂಸ್ಕೃತಿ ಜಾನಪದ ಪರಂಪರೆಗಳ ಸಂಗಮವಾಗಿದೆ. ಸಾಧುಸಂತರು ಸುಧಾರಕರು, ಧಾರ್ಮಿಕ-ಸಾಂಸ್ಕೃತಿಕ ಆಂದೋಲನ ನಡೆಸಿದ ತಾಣ ಇದಾಗಿದೆ. ಹಾಗಾಗಿ ವರಕವಿ ಬೇಂದ್ರೆ ಈ ನೆಲವನ್ನು ಜಾಗೃತ ಭೂಮಿ ಎಂದು ಕರೆದ ಉಲ್ಲೇಖವಿದೆ. ಮಾದೇಶ್ವರ ಪಾದವೂರಿದ ಮರಡಿಗುಡ್ಡ, ಲಿಂಗಯ್ಯ, ಚೆನ್ನಯ್ಯ, ಸಿದ್ದಪ್ಪಾಜಿ, ಮಂಟೇಸ್ವಾಮಿ ಸಂಚರಿಸಿದ ಈ ಪ್ರದೇಶ ಜಾತ್ಯತೀತತೆಯ ತವರು ಎಂದೇ ಹೇಳಬಹುದು.

Tags: