Mysore
26
broken clouds

Social Media

ಶುಕ್ರವಾರ, 15 ಮೇ 2026
Light
Dark

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ; ಪ್ರತಿಷ್ಠಿತ ಕಾನ್‌ ಚಿತ್ರೋತ್ಸವದಲ್ಲಿ ಭಾರತ ಚಿತ್ರೋದ್ಯಮ

ಉತ್ಸವಗಳ ಉತ್ಸವ ಎಂದೇ ಪ್ರತೀತಿ ಪಡೆದಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವ ಫ್ರಾನ್ಸ್‌ನ ಕಾನ್‌ನದು. ಇದೀಗ ಮೊನ್ನೆ ಅದರ ೭೯ನೇ ಆವೃತ್ತಿಗೆ ಚಾಲನೆ ದೊರೆತಿದೆ. ಈ ಉತ್ಸವ ವಿಶ್ವ ಸಿನಿಮಾ ಕೇಂದ್ರ ಎಂದೂ ಹೇಳಲಾಗುತ್ತಿದೆ. ಬಹಳಷ್ಟು ಮಂದಿಗೆ ಈ ಚಿತ್ರೋತ್ಸವ ಆರಂಭವಾದ ಹಿನ್ನೆಲೆ ತಿಳಿದಿರುವ ಸಾಧ್ಯತೆ ಕಡಿಮೆ. ಸಿನಿಮಾ, ಗ್ಲಾಮರ್ ಮೊದಲಾಗಿ ಈ ಚಿತ್ರೋತ್ಸವ ಸುದ್ದಿಯಾಗುತ್ತಿದ್ದರೂ, ಇದು ಆರಂಭವಾಗಲು ರಾಜಕೀಯ ಕಾರಣವಾಯಿತು.

ವಿಶ್ವದ ಮೊತ್ತಮೊದಲ ಚಿತ್ರೋತ್ಸವ ವೆನಿಸ್‌ನಲ್ಲಿ ಆರಂಭವಾಯಿತು. ಆದರೆ ಆ ಉತ್ಸವದಲ್ಲಿ ಪ್ರಶಸ್ತಿ ಪಡೆಯುವ ಚಿತ್ರಗಳ ಕುರಿತಂತೆ ಎದ್ದ ವಿವಾದ, ಕಾನ್ ಚಿತ್ರೋತ್ಸವ ಆರಂಭಿಸಲು ಕಾರಣವಾಯಿತು. ೧೯೩೮ರಲ್ಲಿ ವೆನಿಸ್ ಚಿತ್ರೋತ್ಸವದಲ್ಲಿ ಕಲಾತ್ಮಕ ಚಿತ್ರಗಳಿಗೆ ಪ್ರಶಸ್ತಿಗೆ ನೀಡುವ ಬದಲು ನಾಜಿ ಪ್ರಚಾರದ ಚಿತ್ರಕ್ಕೆ ನೀಡಬೇಕು ಎಂದು ಹಿಟ್ಲರ್ ಮತ್ತು ಮುಸೊಲಿನಿ ಒತ್ತಾಯಿಸಿ, ಹಾಗೆ ಆಗುವಂತೆ ನೋಡಿಕೊಂಡರು. ಇದು ಸ್ವತಂತ್ರ ನಿರ್ಮಾಪಕರು, ಮತ್ತಿತರ ಸೃಜನಶೀಲರನ್ನು ಮತ್ತೊಂದು ಚಿತ್ರೋತ್ಸವ ಆರಂಭಿಸಲು ಪ್ರೇರೇಪಿಸಿತು. -ಫ್ರೆಂಚ್ ರಾಜತಾಂತ್ರಿಕ ಫಿಲಿಪ್ ಎರ್ಲಂಗರ್ ಮತ್ತು ಸಚಿವ ಜೀವ್ ಜೀ ಅವರು ಈ ಕಾನ್ ಚಿತ್ರೋತ್ಸವದ ಸ್ಥಾಪನೆಗೆ ಕಾರಣಕರ್ತರಾದರು.

ರಾಜಕೀಯ ಒತ್ತಡಗಳಿಗೆ ಮಣಿಯದ ಸ್ವತಂತ್ರ ಚಿತ್ರೋತ್ಸವವಾಗಿ ನಡೆಸಲು ಉದ್ದೇಶಿಸಲಾಗಿದ್ದ ಈ ಉತ್ಸವದ ಮೊದಲ ಆವೃತ್ತಿಯ ಉದ್ಘಾಟನೆ ೧೯೩೯ರ ಸೆಪ್ಟೆಂಬರ್ ೧ರಂದು ಆಗಬೇಕಿತ್ತು. ಆದರೆ ಅಂದೇ ಜರ್ಮನಿ ಪೊಲೆಂಡ್ ಮೇಲೆ ದಾಳಿ ನಡೆಸಿತು. ಅದು ೨ನೇ ವಿಶ್ವಮಹಾಯುದ್ಧದ ದಿನಗಳು. ಉತ್ಸವ ರದ್ದಾಯಿತು. ಮಹಾಯುದ್ಧದ ನಂತರ, ೧೯೪೬ರಲ್ಲಿ ಈ ಉತ್ಸವ ಆರಂಭವಾಯಿತು. ಈಗ ನಡೆಯುತ್ತಿರುವುದು ೭೯ನೇ ಆವೃತ್ತಿ.

ಈ ಬಾರಿಯ ಉದ್ಘಾಟನೆಯ ವಿಶೇಷ ಎಂದರೆ ಆ ಸಮಾರಂಭ ಮತ್ತು ಉದ್ಘಾಟನಾ ಚಿತ್ರವನ್ನು ಫ್ರಾನ್ಸ್ ದೇಶದ ೯೫೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನೋಡುವ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿನ ಪ್ರದರ್ಶಕರ ಒಕ್ಕೂಟ ಇದಕ್ಕೆ ಪೂರಕ ಸಹಕಾರವನ್ನು ನೀಡಿತ್ತು. ಅಷ್ಟೇ ಅಲ್ಲ, ಚಿತ್ರೋತ್ಸವದ ವೇಳೆ ನಡೆಯುವ ಹಲವಾರು ಕಾರ್ಯಕ್ರಮಗಳನ್ನು ಆಸಕ್ತರು ನೇರವಾಗಿ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ.

ಈಗಾಗಲೇ ಈ ಅಂಕಣದಲ್ಲಿ ಮೊದಲು ಹೇಳಿದ ಹಾಗೆ, ಕಾನ್ ಚಿತ್ರೋತ್ಸವದಲ್ಲಿ ಹಲವು ಸ್ಪರ್ಧಾ ವಿಭಾಗಗಳು, ಸಮಾನಾಂತರ ಸ್ಪರ್ಧೆಗಳು ಇವೆ. ಮುಖ್ಯ ಸ್ಪರ್ಧೆ, ಅನ್‌ಸರ್ಟನ್ ರಿಗಾರ್ಡ್, ಸಿನೆ ಫೌಂಡೇಷನ್, ಕ್ಯಾಮೆರಾ ಡಿಓರ್, ಇಮ್ಮರ್ಸಿವ್ ಸ್ಪರ್ಧೆ, ಕ್ರಿಟಿಕ್ಸ್ ವೀಕ್, ಕ್ವೀರ್ ಪಾಮ್, ಕಾನ್ ಪ್ರೀಮಿಯರ್, ವಿಶೇಷ ಪ್ರದರ್ಶನ, ಕಿರುಚಿತ್ರ ಸ್ಪರ್ಧೆ, ಸಿನೆ ಫೌಂಡೇಶನ್, ಕಾನ್‌ಕ್ಲಾಸಿಕ್ಸ್, ಪೆಲೆಶಿಯನ್ ಫ್ರಾಜೆಕ್ಟ್, ವಿಶೇಷ ಪ್ರದರ್ಶನ -ಕಿರುಚಿತ್ರ, ಸಿನಿಮಾ ಕುರಿತ ಸಾಕ್ಷ್ಯಚಿತ್ರ, ರೆಸ್ಟಾರ್ಡ್ ಪ್ರಿಂಟ್ಸ್ ಸೇರಿದಂತೆ ಹತ್ತು ಹಲವು ವಿಭಾಗಗಳಲ್ಲಿ ಚಿತ್ರಗಳ ಪ್ರದರ್ಶನ ಸ್ಪರ್ಧೆ ನಡೆಯುತ್ತದೆ. ಪ್ರಧಾನ ಸ್ಪರ್ಧೆಗೆ ಈ ಬಾರಿ ಬಂದಿದ್ದ ಚಿತ್ರಗಳ ಸಂಖ್ಯೆ ೨,೫೦೦ಕ್ಕೂ ಹೆಚ್ಚು. ಅವುಗಳಲ್ಲಿ ೨೨ ಚಿತ್ರಗಳು ಮಾತ್ರ ಸ್ಪರ್ಧೆಗೆ ಆಯ್ಕೆಯಾಗಿವೆ.

ಬೇರೆಬೇರೆ ದೇಶಗಳ ಪೆವಿಲಿಯನ್‌ಗಳು ಅಲ್ಲಿರುತ್ತವೆ. ಈ ಬಾರಿ ಭಾರತದ್ದೂ ಸೇರಿದಂತೆ ೬೦ಕ್ಕೂ ಹೆಚ್ಚು ದೇಶಗಳ ಪೆವಿಲಿಯನ್‌ಗಳಿವೆ. ಅಲ್ಲಿ ಚಿತ್ರೋದ್ಯಮದ ಮಂದಿಗೆ ಪರಸ್ಪರ ಚರ್ಚೆ, ವ್ಯವಹಾರ ಕೊಡು ಕೊಳ್ಳುವಿಕೆಗಳಿಗೆ ಅವಕಾಶವಿದೆ.

ಕಾನ್ ಚಿತ್ರೋತ್ಸವದ ಮತ್ತೊಂದು ಪ್ರಮುಖ ಆಕರ್ಷಣೆ ರೆಡ್‌ಕಾರ್ಪೆಟ್. ಸೆಲೆಬ್ರಿಟಿಗಳಿಗೆ ಮತ್ತಿತರ ತಂತ್ರಜ್ಞರು, ಕಲಾವಿದರಿಗೆ ಅದರ ಮೇಲೆ ನಡೆಯುವುದೆಂದರೆ ಅದು ಪ್ರತಿಷ್ಠೆ. ಈ ಬಾರಿಯೂ ಹಿಂದಿ ಚಿತ್ರರಂಗದ ಸಾಕಷ್ಟು ಮಂದಿ ನಟಿಯರು ಅಲ್ಲಿ ಬಂದಿದ್ದಾರೆ.

ಕಲಾತ್ಮಕ ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗುವುದು, ಪ್ರದರ್ಶನ ಒಂದೆಡೆ ಆದರೆ, ಚಿತ್ರೋದ್ಯಮಿಗಳ ಆಕರ್ಷಣೆಯ ಕೇಂದ್ರ ಅಲ್ಲಿನ ಮಾರುಕಟ್ಟೆ ವಿಭಾಗ (march du film). ವಿಶ್ವದಾದ್ಯಂತ ನಿರ್ಮಾಪಕರು, ಹಂಚಿಕೆದಾರರು ಇಲ್ಲಿಗೆ ಬರುತ್ತಾರೆ. ಬೇರೆ ಬೇರೆ ದೇಶಗಳಲ್ಲಿ ತಯಾರಾದ ತಮ್ಮ ಆಸಕ್ತಿಯ ಚಿತ್ರಗಳನ್ನು ಕೊಳ್ಳಲು. ಮಾರಲು ಇಲ್ಲಿ ಅವಕಾಶ ಇದೆ. ತಮ್ಮ ಚಿತ್ರಗಳ ಪ್ರದರ್ಶನ ಏರ್ಪಡಿಸಿ, ವ್ಯವಹಾರ ನಡೆಸಲು ಮುಕ್ತ ವೇದಿಕೆ ಅಲ್ಲಿದೆ. ಯಾರು ಬೇಕಾದರೂ, ಮಾರುಕಟ್ಟೆ ವಿಭಾಗದಲ್ಲಿ ಪ್ರತಿನಿಽಯಾಗಿ, ಸೂಕ್ತ ಶುಲ್ಕವನ್ನು ಪಾವತಿಸಿ, ತಮ್ಮ ಚಿತ್ರದ ಪ್ರದರ್ಶನವನ್ನು ಏರ್ಪಡಿಸಬಹುದು. ಪ್ರದರ್ಶನಕ್ಕೆ ಬೇರೆ ಬೇರೆ ದೇಶಗಳ ವಿತರಕರನ್ನು ಉದ್ಯಮಿಗಳನ್ನು ಆಹ್ವಾನಿಸಬಹುದು. ಸಾಮಾನ್ಯ ಪ್ರತಿನಿಧಿಗಳಿಗೆ ಅಲ್ಲಿ ಪ್ರವೇಶ ಇರುವುದಿಲ್ಲ. ಸುಮಾರು ೧,೫೦೦ಕ್ಕೂ ಹೆಚ್ಚು ಚಿತ್ರಗಳು ಹೀಗೆ ವ್ಯವಹಾರಕ್ಕಾಗಿ ಅಲ್ಲಿ ಪ್ರದರ್ಶನ ಕಾಣುತ್ತವೆ.

ಕಾನ್ ಚಿತ್ರೋತ್ಸವ ನಡೆಯುವ ಮುಖ್ಯ ಚಿತ್ರಮಂದಿರ ಸಂಕೀರ್ಣದಲ್ಲಿ ಕಡಿಮೆ ಆಸನಗಳ ಹಲವು ಕಿರು ಚಿತ್ರಮಂದಿರಗಳಿವೆ. ಅಲ್ಲಿ ಸಾಕಷ್ಟು ಮುಂಚಿತವಾಗಿ ತಮಗೆ ಬೇಕಾದ ಪ್ರದರ್ಶನ ಗೃಹವನ್ನು ಕಾದಿರಿಸಬಹುದು. ಈ ಬಾರಿ ಅಲ್ಲಿ ಕನ್ನಡ- ಹಿಂದಿ ಚಿತ್ರ, ಕ್ಷತಿ ಸುವರ್ಣ ಅವರ ‘ಸೆಪ್ಟೆಂಬರ್ ೨೧’ ಸೇರಿದಂತೆ ಕೆಲವು ಚಿತ್ರಗಳಿವೆ. ಅಮರ್‌ಜಿತ್ ಸಿಗ್ ಸರೋನ್ ನಿರ್ದೇಶನದ ಪಂಜಾಬಿ ಚಿತ್ರ ‘ಚರ್ದಿಕಲ’, ‘ಮಂಜುಮಲ್ ಬಾಯ್ಸ್’ ಯಶಸ್ಸಿನ ನಂತರ ಚಿದಂಬರಂ ನಿರ್ದೇಶಿಸಿದ ‘ಬಾಲನ್ – ದ ಬಾಯ್’ ಮಲಯಾಳ ಚಿತ್ರ, ಅನಿವಾಸಿ ಭಾರತೀಯರಾದ ಶಿಮೋಯ್ ಚಕ್ರವರ್ತಿ ಅವರ ‘ಸ್ಪಿರಿಟ್ ಆಫ್ ದ ವೈಲ್ಡ್‌ಪವರ್’ ಸಾಕ್ಷ್ಯಚಿತ್ರ, ನಟ, ನಿರ್ದೇಶಕ ಅನ್ಶುಮಾನ್ ಝಾರ ‘ಲಕಡ್‌ಬಗ್ಗ ೨: ದ ಮಂಕಿ ಬಿಸಿನೆಸ್’, ಮನೀಶ್ ಕೆ. ಮಕ್ವಾನ್‌ರ ‘ಗುಡ್‌ಗುಡಿ’ ಇಲ್ಲಿ ಪ್ರದರ್ಶನ ಕಾಣಲಿವೆ. ‘ಬಾಲನ್ -ದ ಬಾಯ್’ ಕೆವಿಎನ್ ನಿರ್ಮಾಣದ ಚಿತ್ರ.

ಕಾನ್ ಚಿತ್ರೋತ್ಸವದಲ್ಲಿ ಈ ಹಿಂದೆ ವಿದ್ಯಾರ್ಥಿ ಚಿತ್ರಗಳ ಸ್ಪರ್ಧೆಯ ವಿಭಾಗದಲ್ಲಿ ಪೂನಾ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಓದಿದ್ದ ಚಿದಾನಂದ ನಾಯ್ಕ ಅವರ ‘ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ ಹೊರತುಪಡಿಸಿದರೆ, ಈ ತನಕ ಯಾವ ಕನ್ನಡ ಚಿತ್ರವೂ ಅಲ್ಲಿ ಸ್ಪರ್ಧೆಗಾಗಲೀ, ಇತರ ವಿಭಾಗಗಳಿಗಾಗಲೀ ಆಯ್ಕೆಯಾಗಿರಲಿಲ್ಲ. ಆ ಚಿತ್ರಕ್ಕೆ ಪ್ರಶಸ್ತಿಯೂ ಬಂತೆನ್ನಿ. ಈ ಬಾರಿಯೂ, ಆ ಸಂಸ್ಥೆಯ ವಿದ್ಯಾರ್ಥಿ ಚಿತ್ರವೊಂದು ಸ್ಪರ್ಧೆಯಲ್ಲಿದೆ. ಅದು ಮೆಹರ್ ಮಲ್ಹೋತ್ರಾ ನಿರ್ದೇಶಿಸಿದ ಪಂಜಾಬಿ ಕಿರುಚಿತ್ರ ‘ಶ್ಯಾಡೋಸ್ ಆಫ್ ದ ಮೂನ್‌ಲೆಸ್ ನೈಟ್’. ಕಾನ್ ಕ್ಲಾಸಿಕ್ ವಿಭಾಗದಲ್ಲಿ ಜಾನ್ ಅಬ್ರಹಾಂ ಅವರ ‘ಅಮ್ಮ ಅರಿಯಾನ್’ ಚಿತ್ರವಿದೆ. ಇದು ೧೯೮೬ರ ಚಿತ್ರ. ಕ್ಲಾಸಿಕ್ ಚಿತ್ರಗಳನ್ನು ಡಿಜಿಟಲ್ ೪ಕೆಯಲ್ಲಿ ಇದನ್ನು ಮರು ಮುದ್ರಿಸಿದ್ದು, ಸಮಾನಾಂತರ ಚಿತ್ರ ಚಳವಳಿಯ ಮಹತ್ವದ ಚಿತ್ರಗಳಲ್ಲಿ ಇದೂ ಒಂದು.

ಮಾರುಕಟ್ಟೆ ವಿಭಾಗದಲ್ಲಿ ವಿಚಾರಸಂಕಿರಣಗಳು, ಸಿನಿಮಾ ಸಂಬಂದಿತ ಗೋಷ್ಠಿಗಳು ನಡೆಯುತ್ತಿರುತ್ತವೆ. ಬದಲಾಗುತ್ತಿವ ಸಿನಿಮಾ ತಂತ್ರಜ್ಞಾನ, ಸಾಧ್ಯತೆಗಳು, ಬೇರೆ ಬೇರೆ ದೇಶಗಳು ಅಲ್ಲಿ ನೀಡುವ ಸೌಲಭ್ಯ, ಉತ್ತೇಜನ ಇವೇ ಮೊದಲಾಗಿ ಅಲ್ಲಿ ತಿಳಿಯಬಹುದು. ಮೊನ್ನೆ ಅಲ್ಲಿ ಭಾರತದ ವಿಚಾರ ಸಂಕಿರಣವಿತ್ತು. ವಿಷಯ: ಕಥೆಗಳ ಶಕ್ತಿ ಕೇಂದ್ರವಾಗಿ ಹೊಮ್ಮುತ್ತಿರುವ ಭಾರತ. ಮನರಂಜನೋದ್ಯಮವನ್ನು ಆರೆಂಜ್ ಎಕಾನಮಿ ಎಂದಿರುವ ಭಾರತದ ಈ ವಿಷಯದ ಕುರಿತಂತೆ, ನಿರ್ದೇಶಕ, ನಿರ್ಮಾಪಕ ಅಶುತೋಷ್ ಗೌರೀಕರ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಚಂಚಲ್ ಕುಮಾರ್, ಗುನೀತ್ ಮೊಂಗಾ ಕಪೂರ್, ನಟಿ ಕಲ್ಯಾಣಿ ಪ್ರಿಯದರ್ಶನ್ ಮುಂತಾದವರು ವಿಷಯದ ಕುರಿತು ಮಾತನಾಡಿದರು.

ಪ್ರತಿ ವರ್ಷ ಕರ್ನಾಟಕದಿಂದ ವಾರ್ತಾ ಇಲಾಖೆಯ ಅಧಿಕಾರಿಗಳು, ಅಕಾಡೆಮಿಯ ಅಧ್ಯಕ್ಷರು, ಅಲ್ಲಿಗೆ ಹೋಗುತ್ತಿದ್ದರು. ಆದರೆ ಈ ಬಾರಿ ಯಾರೂ ತೆರಳಿದಂತಿಲ್ಲ. ರಾಷ್ಟ್ರಪ್ರಶಸ್ತಿ ಪಡೆದ ‘ಕಂದೀಲು’ ಚಿತ್ರದ ನಿರ್ಮಾಪಕ ಕೊಟ್ಟುಕಾತ್ತಿರ ಪ್ರಕಾಶ್ ಸ್ವಯಂ ಆಸಕ್ತಿಯಿಂದ ಅಲ್ಲಿ ಹೋಗಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕರಾಗಿದ್ದ ವಿದ್ಯಾಶಂಕರ್ ಅಲ್ಲಿದ್ದಾರೆ. ಮರಾಠಿ ಚಿತ್ರ ‘ಗೋಂದಲ್’ ವಿತರಣೆಯ ಹಕ್ಕನ್ನು ಪಡೆದಿರುವ ಕನ್ನಡಿಗ ಗುಜ್ಜಾರ್ ತಮ್ಮ ಚಿತ್ರದ ವ್ಯವಹಾರಕ್ಕಾಗಿ ಅಲ್ಲಿದ್ದಾರೆ. ಮಹಾರಾಷ್ಟ್ರ ಸರ್ಕಾರ ಎರಡು ಮರಾಠಿ ಚಿತ್ರಗಳನ್ನು ಅಽಕೃತವಾಗಿ ಆಯ್ಕೆ ಮಾಡಿ ಕಳುಹಿಸಿದೆ. ಕನ್ನಡ ಚಿತ್ರೋದ್ಯಮ ಅಲ್ಲಿನ ಸಾಧ್ಯತೆಗಳನ್ನು ಬಳಸಿದ್ದು ಅಪರೂಪ. ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರವನ್ನು ಅಲ್ಲಿ ಪರಿಚಯಿಸಿದ್ದರು.

ಈ ಬಾರಿ ಅಂತಹದೊಂದು ಪ್ರಯತ್ನವನ್ನು ಹಿಂದಿ ಮತ್ತು ಕನ್ನಡದಲ್ಲಿ ತಯಾರಾಗಿರುವ ‘ಸೆಪ್ಟೆಂಬರ್ ೨೧’ ಚಿತ್ರದ ನಿರ್ಮಾಪಕರು ಮಾಡಿದ್ದಾರೆ. ಚಲನಚಿತ್ರ ತರಬೇತಿ ಪಡೆದಿರುವ, ಮುಂಬೈಯಲ್ಲಿರುವ ಕನ್ನಡತಿ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಚಿತ್ರವಿದು. ವಿಸಿಕಾ ಫಿಲ್ಮ್ಸ್, ಎಫ್‌ಎಂಡಿ ಪ್ರೊಡಕ್ಷನ್ಸ್, ಹಮಾರಾ ಮೂವಿ ಮತ್ತು ಫಿಲ್ಮ್ಸ್ ಮ್ಯಾಕ್ಸ್ ನಿರ್ಮಿಸಿರುವ ಈ ಚಿತ್ರದ ತಾರಾಗಣದಲ್ಲಿ ಪ್ರಿಯಾಂಕಾ ಉಪೇಂದ್ರ, ಜರೀನಾ ವಹಾಬ್, ಪ್ರವೀಣ್ ಸಿಂಗ್ ಸಿಸೋಡಿಯಾ, ಅಜಿತ್ ಶಿಧಯೆ ಮತ್ತು ಅಮಿತ್ ಬೆಹ್ಲ್ ಇದ್ದಾರೆ.

ಕಾನ್ ಚಿತ್ರೋತ್ಸವ ನಡೆಯುವ ವೇಳೆ, ಅದಕ್ಕೆ ಪೂರಕವಾದ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತವೆ, ಅವುಗಳಲ್ಲಿ ಮೊನ್ನೆ ಮೇ ೧೨-೧೩ರ ವರೆಗೆ ನಡೆದ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ ೨೦೨೬’ ಕಾರ್ಯಕ್ರಮದಲ್ಲಿ. AI Artistry & activism ವಿಷಯದ ಮೇಲೆ ಕೃತಿ ಸುವರ್ಣ ಅವರು ಪಾಲ್ಗೊಂಡು ಮಾತನಾಡಿದ್ದಾರೆ.

ಕರ್ನಾಟಕ ಚಿತ್ರೋದ್ಯಮ ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ಹೊಸ ಪ್ರತಿಭಾವಂತರಿಗೆ ಸಮಕಾಲೀನ ಸಿನಿಮಾ ಜಗತ್ತನ್ನು ಪರಿಚಯಿಸುವ ಇಂತಹ ಚಿತ್ರೋತ್ಸವಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು. ಸರ್ಕಾರವೂ ಆ ನಿಟ್ಟಿನಲ್ಲಿ ಮನಸ್ಸು ಮಾಡಬೇಕು.

 

Tags:
error: Content is protected !!