Mysore
36
overcast clouds

Social Media

ಶುಕ್ರವಾರ, 15 ಮೇ 2026
Light
Dark

ಗಗನಮುಖಿಯಾಗಿದ್ದ ತೆಂಗಿನ ಕಾಯಿ ದರ ಕುಸಿತ

ಎಚ್‌.ಎಸ್.ದಿನೇಶ್‌ ಕುಮಾರ್‌

ಮೈಸೂರು : ಕಳೆದ ವರ್ಷ ಗಗನಕ್ಕೇರಿದ್ದ ತೆಂಗಿನಕಾಯಿ ಬೆಲೆ ಇದೀಗ ಶೇ. ೫೦ರಷ್ಟು ದರ ಇಳಿದಿದೆ. ಇದರಿಂದಾಗಿ ಗ್ರಾಹಕರು ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡು ವಂತಾಗಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿನ ಯದ್ಧದ ಕಾರ್ಮೋಡದ ಬಿಸಿ ರೈತರ ಮೇಲೂ ಬಿದ್ದಿದೆ. ತೆಂಗು ಹಾಗೂ ತೆಂಗಿನ ಉತ್ಪನ್ನಗಳು ವಿದೇಶಕ್ಕೆ ರಫ್ತಾಗುವುದು ಕಡಿಮೆಯಾದ ಕಾರಣ ತೆಂಗಿನ ಬೆಲೆ ಕುಸಿದಿದೆ ಎಂಬುದು ತೆಂಗಿನ ಕಾಯಿ ಮಾರಾಟಗಾರರ ಅಳಲು.

ಕಳೆದ ಫೆಬ್ರವರಿ ತಿಂಗಳಿನಲ್ಲಿ ಕೂಡ ರಾಜ್ಯಾದ್ಯಂತ ತೆಂಗಿನಕಾಯಿ ಬೆಲೆ ಸಾಕಷ್ಟು ಹೆಚ್ಚಳವಾಗಿತ್ತು. ಒಂದು ತೆಂಗಿನಕಾಯಿ ಬೆಲೆ ಕನಿಷ್ಠ ೨೫ ರೂ. ಗಳಿಂದ ೩೦ ರೂ. ಗಳವರೆಗೆ ಮಾರಾಟವಾಗುತ್ತಿತ್ತು. ಕಾಯಿಯ ಬೆಲೆ ಹೆಚ್ಚಳವಾಗಿದ್ದರಿಂದ ಗ್ರಾಹಕರ ಜೇಬಿಗೂ ಕತ್ತರಿ ಬೀಳುವಂತಾಗಿತ್ತು. ಆದರೆ, ರೈತರಿಗೆ ಆರ್ಥಿಕವಾಗಿ ಅನುಕೂಲವಾಗಿತ್ತು.

ತೆಂಗಿನಕಾಯಿ ಬೆಲೆ ಹೆಚ್ಚಳದಿಂದ ಜನಸಾಮಾನ್ಯರೂ ಸೇರಿದಂತೆ ಹೋಟೆಲ್ ಉದ್ಯಮದ ಮೇಲೂ ತೀವ್ರ ಪರಿಣಾಮ ಬೀರಿತ್ತು. ಆದರೆ, ಕಳೆದ ಒಂದು ತಿಂಗಳಿಂದೀಚೆಗೆ ತೆಂಗಿನ ಕಾಯಿಯ ಬೆಲೆ ಇಳಿಕೆ ಕಂಡಿದೆ. ಇದರಿಂದಾಗಿ ಗ್ರಾಹಕರಲ್ಲಿ ಸಂತಸ ಮೂಡಿದೆ.

ಕಳೆದ ವರ್ಷ ಸಕಾಲಕ್ಕೆ ಮಳೆಯಾದ ಕಾರಣ ಕೇರಳದಲ್ಲಿ ಹಾಗೂ ರಾಜ್ಯದ ಕರಾವಳಿ ಭಾಗದಲ್ಲಿ ಯಥೇಚ್ಛವಾಗಿ ತೆಂಗಿನಕಾಯಿ ಫಲ ಬಂದಿದ್ದು ಹಾಗೂ ಯುದ್ಧ, ಈ ಎರಡೂ ಕಾರಣಗಳಿಂದಾಗಿ ತೆಂಗಿನಕಾಯಿ ಬೆಲೆ ಇಳಿಮುಖವಾಗಿದೆ ಎಂಬುದು ಮತ್ತೆ ಕೆಲವರ ವಾದ.

ಖರೀದಿ ಕೇಂದ್ರವಿಲ್ಲ
ರಾಜ್ಯಾದ್ಯಂತ ತೆಂಗಿನಕಾಯಿ ಬೆಲೆ ಗಣನೀಯವಾಗಿ ಇಳಿಮುಖವಾಗಿರುವುದನ್ನು ಗಮನಿಸಿದ ರಾಜ್ಯ ಸರ್ಕಾರ ಚಾಮರಾಜನಗರ, ಹಾಸನ, ಮಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಆದರೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿ ಖರೀದಿ ಕೇಂದ್ರಗಳಿದ್ದರೂ, ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ. ೯ ತಾಲ್ಲೂಕುಗಳನ್ನು ಒಳಗೊಂಡು ಮೈಸೂರು ಜಿಲ್ಲೆಯಲ್ಲಿ ಸರ್ಕಾರ ಖರೀದಿ ಕೇಂದ್ರವನ್ನು ಇನ್ನೂ ಕೂಡ ತೆರೆಯಲು ಮುಂದಾಗಿಲ್ಲ

Tags:
error: Content is protected !!