ಶ್ರೀಹರಿಕೋಟ: ಐರೋಪ್ಯ ಸಂಸ್ಥೆಯ ಪ್ರೋಬಾ-3 ಯೋಜನೆಯ ಎರಡು ಬಾಹ್ಯಾಕಾಶ ನೌಕೆಯನ್ನು ಹೊತ್ತ ಪಿಎಸ್‌ಎಲ್‌ವಿ ರಾಕೆಟ್ ಆಂಧ್ರ ಪ್ರದೇಶದ ಶ್ರೀ ಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಹಾರಿದೆ.
ಪಿಎಸ್‌ಎಲ್‌ವಿ ಸಿ-59 ರಾಕೆಟ್ ಯಶಸ್ವಿಯಾಗಿ ಬಾಹ್ಯಾಕಾಶ ಸೇರಿದ್ದು. ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ESA) ಜೊತೆ ಕೈ ಜೋಡಿಸಿರುವುದು ಹೆಮ್ಮೆಯ ಸಂಗತಿ ಎಂದು ಇಸ್ರೋ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ.
ಪ್ರಪಂಚದ ಮೊದಲ ಮಿಷನ್ ಎಂದು ಕರೆಸಿಕೊಂಡ ʼಪ್ರೋಬಾ-3ʼ ಯಲ್ಲಿ ʼಕರೋನಾಗ್ರಾಫ್ʼ (310 ಕೆ.ಜಿ) ಮತ್ತು ʼಆಕಲ್ಟರ್ʼ (240 ಕೆ.ಜಿ. ತೂಕ) ಎಂಬ ಎರಡು ಬಾಹ್ಯಾಕಾಶ ನೌಕೆಗಳನ್ನು ಒಟ್ಟಿಗೆ ಉಡಾವಣೆ ಮಾಡಲಾಗಿದೆ. ಇವು ಮೊದಲ ಕಕ್ಷೆಯನ್ನು ತಲುಪಿದ ನಂತರ ಎರಡೂ ಉಪಗ್ರಹಗಳು 150 ಮೀಟರ್ ಅಂತರದಲ್ಲಿ ಒಂದು ದೊಡ್ಡ ಉಪಗ್ರಹವಾಗಿ ಒಟ್ಟಿಗೆ ಹಾರುತ್ತವೆ.
ಈ ಕಾರ್ಯಾಚರಣೆಯ ಉದ್ದೇಶ ಸೂರ್ಯನ ಹೊರಗಿನ ವಾತಾವರಣ ಹಾಗೂ ಬಾಹ್ಯಾಕಾಶ ನೌಕೆಗಳ ನಿಖರ ಚಲನೆ ಅಧ್ಯಯನ ಮಾಡುವುದು ಎಂದು ಇಎಸ್‌ಎ ಹೇಳಿದೆ.
ಈ ಉಪಗ್ರಹಗಳು ಬಾಹ್ಯಾಕಾಶ ಸೇರುತ್ತಿದ್ದಂತೆ ಕೃತಕ ಸೂರ್ಯಗ್ರಹಣ ಸೃಷ್ಠಿಸಿ, ಸೂರ್ಯನ ಕರೋನಾಗ್ರಾಫ್ ಅಧ್ಯಯನ ಮಾಡಲು ಸಹಾಯ ಮಾಡುತ್ತವೆ. ಇದರಿಂದಾಗಿ ಸೂರ್ಯನ ಮೇಲಿನ ವಾತಾವರಣದ ಬಗ್ಗೆ ಸಂಶೋಧನೆ ಮಾಡಲು ಬಾಹ್ಯಾಕಾಶ ವಿಜ್ಞಾನಿಗಳಿಗೆ ಇದೊಂದು ಪ್ರಮುಖ ಉದ್ದೇಶವಾಗಿದೆ ಎಂದು ಇಸ್ರೋ ತಿಳಿಸಿದೆ.