ಬೆಂಗಳೂರು : ರಾಜ್ಯದಲ್ಲಿ ಯಾವುದೇ ರಾಜಕೀಯ ಕ್ರಾಂತಿಯಾಗುವುದಿಲ್ಲ. ಹೈಕಮಾಂಡ್ ಬಯಸಿದ್ದಷ್ಟು ದಿನವೂ ಮುಖ್ಯಮಂತ್ರಿ ಮುಂದುವರಿಯುತ್ತಾರೆ ಎಂದು ಹೇಳುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಿದ್ದಾರೆ.
ದೆಹಲಿಗೆ ಭೇಟಿ ನೀಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನವೆಂಬರ್ 21ಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಗಡುವು ನೀಡಲಾಗಿದೆ. ಕರ್ನಾಟಕದಲ್ಲಿ ನವೆಂಬರ್ ತಿಂಗಳಿನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ ಎಂಬೆಲ್ಲಾ ವದಂತಿಗಳಿಗೆ ಸಾರಾಸಗಟಾಗಿ ತೆರೆ ಎಳೆದಿದ್ದಾರೆ.
ಕ್ರಾಂತಿಯಾಗುವುದು ನಿಜ. ಆದರೆ ಅದು 2028ಕ್ಕೆ ಮಾತ್ರ. ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಮತ್ತೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲಿದೆ. ಆ ಕ್ರಾಂತಿ ಹೊರತು ಪಡಿಸಿದರೆ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನರ್‌ರಚನೆ ಸೇರಿದಂತೆ ಇನ್ಯಾವುದೇ ಕ್ರಾಂತಿಯಾಗುವುದಿಲ್ಲ ಎಂದು ಒತ್ತಿ ಹೇಳಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಭೇಟಿ ನೀಡಿದ ವೇಳೆಯಲ್ಲೇ ಹೇಳಿಕೆ ನೀಡಿ, ಮುಂದಿನ 5 ವರ್ಷವೂ ತಾವೇ ಮುಖ್ಯಮಂತ್ರಿಯಾಗಿರುವುದಾಗಿ ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದರು. ಈಗ ಡಿ.ಕೆ.ಶಿವಕುಮಾರ್ ಅದೇ ದೆಹಲಿಯ ಭೇಟಿಯ ವೇಳೆ ಹೇಳಿಕೆ ನೀಡಿ ಎಲ್ಲಾ ಗೊಂದಲಗಳಿಗೂ ಇತಿಶ್ರೀ ಹಾಡುವ ಪ್ರಯತ್ನ ಮಾಡಿದ್ದಾರೆ.
ಇದನ್ನು ಓದಿ: 2028ಕ್ಕೆ ರಾಜ್ಯದಲ್ಲಿ ದೊಡ್ಡ ಕ್ರಾಂತಿಯಾಗುತ್ತೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್
ದೆಹಲಿಯಲ್ಲಿ ತಾವು ಪಕ್ಷ ಸಂಘಟನೆಗೆ ಸಂಬಂಧಪಟ್ಟಂತೆ ವರಿಷ್ಠ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡಬಹುದು. ಅದನ್ನು ಹೊರತು ಪಡಿಸಿದರೆ, ನಾಯಕತ್ವ ಬದಲಾವಣೆಯಾಗಲಿ, ಅಧಿಕಾರ ಹಂಚಿಕೆಯಾಗಲಿ, ಸಚಿವ ಸಂಪುಟ ಪುನರ್ ರಚನೆಗೆ ಸಂಬಂಧಿಸಿದ್ದಂತಾಗಲಿ ಮಾತನಾಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಸಂಪುಟ ಪುನರ್‌ರಚನೆ ಮುಖ್ಯಮಂತ್ರಿ ಅವರ ಪರಮಾಧಿಕಾರ. ಅದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ನನ್ನ ಬಳಿಯಂತೂ ಯಾವುದೇ ವಿಚಾರಗಳು ಪ್ರಸ್ತಾಪವಾಗಿಲ್ಲ. ನಾಯಕತ್ವ ಬದಲಾವಣೆ ಕುರಿತು ಪಕ್ಷ ಹೇಳಿದಂತೆ ಕೇಳುತ್ತೇವೆ ಎಂದು ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರು ಸ್ಪಷ್ಟಪಡಿಸಿದ್ದೇವೆ. ಯಾವತ್ತಾದರೂ ನಾನು ಬೇರೆ ರೀತಿಯಲ್ಲಿ ಮಾತನಾಡಿದ್ದೇನೆಯೇ? ಎಂದು ಪ್ರಶ್ನಿಸಿದರು.
5 ವರ್ಷ ಮುಖ್ಯಮಂತ್ರಿ ಇರಬೇಕೆಂದು ಹೈಕಮಾಂಡ್ ಹೇಳಿದರೆ ಹಾಗೆಯೇ ಪಾಲಿಸುತ್ತೇವೆ. 10 ವರ್ಷ, 15 ವರ್ಷ ಮುಖ್ಯಮಂತ್ರಿಯೇ ಮುಂದುವರಿಬೇಕೆಂದರೆ ನಾವು ಒಪ್ಪಿಕೊಳ್ಳುತ್ತೇವೆ. ನಾನಂತೂ ಪಕ್ಷದ ಶಿಸ್ತಿನ ಶಿಪಾಯಿ. ಗಡಿಯನ್ನು ದಾಟಿ ಹೋಗುವುದಿಲ್ಲ. ನಮಗೆ ಹೇಳಿರುವ ಕೆಲಸವನ್ನು ಚಾಚು ತಪ್ಪದೆ ಮಾಡುತ್ತೇವೆ ಎಂದು ಹೇಳಿದರು.
ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿ ಯಾವ ಕ್ರಾಂತಿಗಳು ಆಗುವುದಿಲ್ಲ. ಕ್ರಾಂತಿಯಂತೂ ಆಗುತ್ತದೆ. 2028ಕ್ಕೆ ಕಾಂಗ್ರೆಸ್ ಸರ್ಕಾರ ಮರಳಿ ಅಧಿಕಾರಕ್ಕೆ ಬರುತ್ತದೆ. ನವೆಂಬರ್ ತಿಂಗಳಿನಲ್ಲಿ 22, 26 ಎಂದು ದಿನಾಂಕಗಳನ್ನು ಅನಗತ್ಯವಾಗಿ ಬರೆಯಲಾಗುತ್ತಿದೆ. ಅಂತಹ ಸುದ್ದಿಗಳು ಆಧಾರ ರಹಿತ ಎಂದರು.
ಎರಡೂವರೆ ವರ್ಷಗಳ ಬಳಿಕ ಸಚಿವ ಸಂಪುಟ ಪುನರ್‌ರಚನೆಯಾಗುತ್ತದೆ ಎಂದು ಕಾಯುತ್ತಿರುವ ಆಕಾಂಕ್ಷಿಗಳಿ ನಿರಾಶೆಯಾಗುವಂತೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅದ್ಯಾವುದೂ ನಡೆಯುವುದಿಲ್ಲ. ಹೈಕಮಾಂಡ್‌ಗೆ ಯಾವಾಗ ಏನೂ ಮಾಡಬೇಕೆಂದು ಗೊತ್ತಿದೆ ಎಂದಿದ್ದಾರೆ. ಈ ಮೂಲಕ ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡಿದ ನವೆಂಬರ್ ಕ್ರಾಂತಿಯ ಬಗ್ಗೆ ಡಿ.ಕೆ.ಶಿವಕುಮಾರ್ ತೆರೆ ಎಳೆದಿದ್ದಾರೆ.





