ಬೆಳಗಾವಿ: ಯತ್ನಾಳ್ ಕಡೆಯಿಂದ ಹೈಕಮಾಂಡ್‌ಗೆ ಪತ್ರ ಬರೆಸಿ ಪುನಃ ಪರಿಶೀಲನೆ ಮಾಡುವಂತೆ ಮನವಿ ಮಾಡುತ್ತೇವೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಉಚ್ಛಾಟನೆಯ ಯತ್ನ ಕಳೆದ ಒಂದು ತಿಂಗಳಿನಿಂದಲೂ ನಡೆಯುತ್ತಿತ್ತು. ಇದರ ಬಗ್ಗೆ ನಮಗೆ ಮೊದಲೇ ಸುದ್ದಿ ಬಂದಿತ್ತು ಎಂದು ಹೇಳಿದರು.
ಹೈಕಮಾಂಡ್ ಜೊತೆಗೆ ನಿನ್ನೆ ಮಾತನಾಡಿದ್ದೇನೆ. ಪಕ್ಷಕ್ಕಾಗಿ ಯತ್ನಾಳ್ ನ್ಯಾಯಯುತವಾಗಿ ದುಡಿದಿದ್ದಾರೆ. ಇದು ವಿರೋಧಿ ಬಣಕ್ಕೂ ಎಚ್ಚರಿಕೆಯ ಗಂಟೆಯಾಗಿದ್ದು, ಯತ್ನಾಳ್ ಮತ್ತೆ ಬಿಜೆಪಿಗೆ ವಾಪಸ್ ಬರುತ್ತಾರೆ ಎಂದರು.
ಯತ್ನಾಳ್ ಉಚ್ಛಾಟನೆಯಾಗಲು ಯಾರ ಕೈವಾಡವಿದೆ ಎಂದು ಹೇಳುವುದಿಲ್ಲ. ಯತ್ನಾಳ್ ಅವರು ಒಂಟಿಯಾಗಿಲ್ಲ. ಅವರ ಜೊತೆ ಹಾಗೂ ಅವರ ಪರ ನಾವೆಲ್ಲಾ ಇದ್ದೇವೆ ಎಂದರು.