ದಾವಣಗೆರೆ: ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ರಕ್ಷಣೆಗಾಗಿ ಹಿಂದುತ್ವ ಎಂಬ ಗುರಾಣಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ʼಹಿಂದುತ್ವದ ಹುಲಿʼ ಎಂದು ತಮಗೆ ತಾವೇ ಘೋಷಣೆ ಮಾಡಿಕೊಂಡಿರುವ ನಕಲಿ ಹಿಂದೂ ನಾಯಕ. ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ಅವರ ವಿರುದ್ಧ ಮಾತನಾಡಿ ರಾಜ್ಯಾದ್ಯಾಂತ ಸುದ್ದಿಯಾಗಲು ಯತ್ನಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಸಾಮಾಜಿಕ ಮಾಧ್ಯಮ ಬಳಸಿಕೊಂಡು ಯಡಿಯೂರಪ್ಪ ಕುಟುಂಬದ ವಿರುದ್ಧ ತೇಜೋವಧೆ ಮಾಡಲಾಗುತ್ತಿದೆ. ಯತ್ನಾಳ್ ನಿಂದನೆಯಿಂದ ಯಡಿಯೂರಪ್ಪ ಅವರ ಗೌರವ ಕಡಿಮೆ ಆಗುವುದಿಲ್ಲ ಎಂದು ತಿಳಿಸಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನೀವು ಚುನಾವಣೆ ಎದುರಿಸಿದರೆ ಠೇವಣಿ ಕೂಡ ಸಿಗುವುದಿಲ್ಲ. ಆದರೂ ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣಿತ್ತಿದ್ದೀರಿ ಎಂದು ಕುಟುಕಿದರು.
ಹರಿಹರ ವೀರಶೈವ ಲಿಂಗಾಯತ ಪಂಚಮಶಾಲಿ ಪೀಠದ ಧರ್ಮದರ್ಶಿ ಚಂದ್ರಶೇಖರ ಪೂಜಾರ್, ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್, ಧನಂಜಯ ಕಡ್ಲೆಬಾಳು, ಎಸ್.ಎಂ.ರೇವಣ್ಣಸಿದ್ದಪ್ಪ, ಗದಿಗೆಪ್ಪ, ರಾಜು ವೀರಣ್ಣ, ಚಂದ್ರು ಪಾಟೀಲ್ ಹಾಜರಿದ್ದರು.