Mysore
24
light intensity drizzle

Social Media

ಗುರುವಾರ, 12 ಡಿಸೆಂಬರ್ 2024
Light
Dark

ಎಫ್‌ಡಿಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ: 13 ಆರೋಪಿಗಳ ಬಂಧನ

ಕಲಬುರಗಿ : ರಾಜ್ಯದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸುತ್ತಿದ್ದು, ಎಫ್‌ಡಿಎ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಕಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳನ್ನು ದಾಖಲಿಸಿ, 13 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣ ಸಂಬಂಧ ಪೊಲೀಸರು ತ್ರಿಮೂರ್ತಿ (ಆರೋಪಿ 1), ಅವರ ಸಹೋದರ ಅಂಬರೀಶ್ (ಆರೋಪಿ 2) ಮತ್ತು ಆರ್‌ಡಿ ಪಾಟೀಲ್ (ಆರೋಪಿ 3) ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ತ್ರಿಮೂರ್ತಿ ಮತ್ತು ಆರ್.ಡಿ.ಪಾಟೀಲ ಇಬ್ಬರೂ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದವರಾಗಿದ್ದಾರೆಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ಅಭಿಷೇಕ್ ಎಂಬಾತನನ್ನು ಕಲಬುರಗಿಯಲ್ಲಿ ಬಂಧನಕ್ಕೊಳಪಡಿಸಲಾಗಿದೆ.

ಅಫಜಲಪುರದಲ್ಲೂ ಮೂವರನ್ನು ಬಂಧಿಸಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಗರದ ನ್ಯೂ ಕನ್ನಡ ಪಿಯು ಕಾಲೇಜ್, ಪಿಯು ಕಾಲೇಜ್, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್, ಎಲ್‌ಕೆಇಟಿ ಬಾಲಕೀಯರ ಪಿಯು ಕಾಲೇಜ್ ಹಾಗೂ ಮಹಾತ್ಮಗಾಂಧಿ ಪಿಯು ಕಾಲೇಜ್‌ಗಳಲ್ಲಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಬ್ಲೂಟೂತ್ ಬಳಸಿರುವುದು ದೃಢಪಟ್ಟಿದೆ, ವಿಚಾರಣೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ತಿಳಿಸಿದ್ದಾರೆ,

ಈ ಪ್ರಕರಣದಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪೂರ ಹಾಗೂ ವಿಜಯಪುರ ಜಿಲ್ಲೆಯ ಒಟ್ಟು 9 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ತನಿಖೆ ಮಾಡುತ್ತಿದ್ದು, ಇನ್ನೂಳಿದ ವ್ಯಕ್ತಿಗಳು ಯಾರಿದ್ದಾರೆ ಎಂಬ ವಿಚಾರಣೆ ನಡೆಸುತ್ತಿದ್ದಾರೆ.

ಶನಿವಾರ ಬೆಳಿಗ್ಗೆ ನಡೆದ ಪರೀಕ್ಷಾ ಕೇಂದ್ರಗಳಲ್ಲಿ ಜಿಲ್ಲಾಡಳಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳನ್ನು ಪರಿಶೀಲನೆ ಮಾಡುವ ಮೆಟಲ್ ಡಿಟೆಕ್ಟರ್ ಬಳಕೆ ಮಾಡಲಿಲ್ಲ, ಪರಿಣಾಮ ಅಕ್ರಮಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಅಕ್ರಮದ ಪ್ರಮುಖ ಆರೋಪಿ ಪುಟ್ಟು ತಂ. ರಾಜಕುಮಾರ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಸೊನ್ನ ಗ್ರಾಮದವನಾಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು 2ನೇ ಪೇಪರ್ ಪರೀಕ್ಷೆ ಸಮಯದಲ್ಲಿ ಮೆಟಲ್ ಡಿಟೆಕ್ಟರ್ ಬಳಕೆ ಮಾಡಿ, ತೀವ್ರ ಪರಿಶೀಲನೆ ಮಾಡಿದರು.

ಪಿಎಸ್‌ಐ ಪರೀಕ್ಷೆ ಹಗರಣದ ಕಿಂಗ್‌ಪಿನ್‌ಗಳಲ್ಲಿ ಒಬ್ಬರಾಗಿದ್ದ ಆರ್‌.ಡಿ ಪಾಟೀಲ್ ಈ ಅಕ್ರಮದ ಹಿಂದಿರುವ ವ್ಯಕ್ತಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ಪಾಟೀಲ್ ಜಾಮೀನಿನ ಮೇಲೆ ಹೊರಗಿದ್ದಾನೆ.

ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಬ್ಲ್ಯೂಟೂತ್ ಬಳಸಿ ಉತ್ತರ ಬರೆಯುತ್ತಿದ್ದರು ಎಂದು ತಿಳಿದುಬಂದಿದೆ. ಶರಣಬಸವೇಶ್ವರ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ತ್ರಿಮೂರ್ತಿ ತಳವಾರ ಎಂಬಾತನನ್ನು ಮೊದಲಿಗೆ ಪೊಲೀಸರು ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಈತ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ತನ್ನ ಸಹೋದರ ಅಂಬರೀಷ್ ಪರೀಕ್ಷೆ ಕೇಂದ್ರದ ಹೊರಗೆ ಕಾಲರಿನಲ್ಲಿ ಕುಳಿತು ಮೊಬೈಲ್ ಫೋನ್ ಮೂಲಕ ಉತ್ತರ ಹೇಳುತ್ತಿದ್ದ. ಆರ್.ಡಿ.ಪಾಟೀಲ್ ಸಹೋದರನಿಗೆ ಸಹಾಯ ಮಾಡಿದ್ದ ಎಂದು ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ.

ಯಾದಗಿರಿ ಎಸ್ಪಿ ಜಿ ಸಂಗೀತಾ ಅವರು ಮಾತನಾಡಿ, ಅಫಜಲಪುರ ತಾಲೂಕು ಮತ್ತು ವಿಜಯಪುರ ಜಿಲ್ಲೆಯಲ್ಲಿ ಒಂಬತ್ತು ಮಂದಿ ಅಭ್ಯರ್ಥಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಂಧಿತ ಅಭ್ಯರ್ಥಿಗಳು ನ್ಯೂ ಕನ್ನಡ ಪಿಯು ಕಾಲೇಜು, ಸಬಾ ಪಿಯು ಕಾಲೇಜು, ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಬಾಲಕಿಯರ ಎಲ್‌ಕೆಇಟಿ ಪಿಯು ಕಾಲೇಜು ಮತ್ತು ಮಹಾತ್ಮ ಗಾಂಧಿ ಪಿಯು ಕಾಲೇಜುಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ವಿವಿಧ ನಿಗಮ ಮತ್ತು ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಭಾನುವಾರವೂ ಪರೀಕ್ಷೆಗಳು ನಡೆಯಲಿವೆ ಎಂದು ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆಂದು ಹೇಳಿದ್ದಾರೆ.

ಕಲಬುರಗಿ ಮತ್ತು ಯಾದಗಿರಿ ಪೊಲೀಸರಿಂದ ವರದಿ ಬಂದ ನಂತರ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ನಾವು ವಿರೋಧ ಪಕ್ಷದಲ್ಲಿದ್ದಾಗ ಪಿಎಸ್‌ಐ ಹಗರಣವನ್ನು ಬಯಲಿಗೆಳೆದಿದ್ದೇವೆ. ಈಗ ನಾವು ಸರ್ಕಾರ ನಡೆಸುತ್ತಿದ್ದು, ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತೇವೆ. ಅಮಾಯಕರಿಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ಅವರು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ