ಬೆಂಗಳೂರು : ಸರ್ಕಾರಿ ಸೇವೆಯಲ್ಲಿದ್ದುಕೊಂಡು ನಿಯಮಗಳನ್ನು ಉಲ್ಲಂಘಿಸಿ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು ಘಟನೆ ನಡೆದು ಬರೋಬ್ಬರಿ ೯ ತಿಂಗಳ ಬಳಿಕ ಅಮಾನತ್ತುಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಗುರುರಾಜ್ ಜೋಶಿ (ಶಿಕ್ಷಕರು, ಹುಣಸಗಿ ಬಾಲಕಿಯರ ಪ್ರೌಢಶಾಲೆ) ಮತ್ತು ಅಣ್ಣಾಸಾಹೇಬ್ ದೇಶಮುಖ್ (ಮುಖ್ಯ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಪ್ಪಿ) ಅಮಾನತ್ತುಗೊಂಡವರು. ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ದೂರು ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರದ ಆಧಾರದ ಮೇಲೆ ಯಾದಗಿರಿ ಡಿಡಿಪಿಐ ಚನ್ನಬಸಪ್ಪ ಮುದೋಳ್ ಅವರು ಈ ಆದೇಶ ಹೊರಡಿಸಿದ್ದಾರೆ.
ಆರ್‌ಎಸ್‌ಎಸ್ ಶತಮಾನೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಕಳೆದ ವರ್ಷ (ನವೆಂಬರ್‌ನಲ್ಲಿ) ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ಬೃಹತ್ ಪಥಸಂಚಲನವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹುಣಸಗಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಗುರುರಾಜ್ ಜೋಶಿ ಹಾಗೂ ಕುಪ್ಪಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಣ್ಣಾಸಾಹೇಬ್ ದೇಶಮುಖ್ ಸಕ್ರಿಯವಾಗಿ ಭಾಗವಹಿಸಿದ್ದರು ಎನ್ನಲಾಗಿದೆ.
ಸರ್ಕಾರಿ ನೌಕರರಾಗಿರುವವರು ಯಾವುದೇ ರಾಜಕೀಯ ಅಥವಾ ಸಿದ್ಧಾಂತ ಆಧಾರಿತ ಸಂಘಟನೆಗಳ ಚಟುವಟಿಕೆಗಳು ಹಾಗೂ ಪಥಸಂಚಲನಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಸೇವಾ ನಿಯಮವಿದೆ. ಇದನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಂಘಟನೆಯ ಮುಖಂಡರು ನಿರಂತರವಾಗಿ ದೂರುಗಳನ್ನು ದಾಖಲಿಸಿದ್ದರು.
ಈ ಕುರಿತು ಸಂಘಟನೆಯು ಅಂದು ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿತ್ತು. ದೂರಿನ ಗಂಭೀರತೆಯನ್ನು ಪರಿಗಣಿಸಿದ ಪ್ರಿಯಾಂಕ್ ಖರ್ಗೆ ಅವರು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಅಧಿಕೃತ ಪತ್ರ ಬರೆದು ಒತ್ತಾಯಿಸಿದ್ದರು.




