ಕಠ್ಮಂಡು: ನೇಪಾಳದ ಭೀಕರ ಪ್ರವಾಹದಲ್ಲಿ ನಾಪತ್ತೆಯಾಗಿದ್ದ 213 ಭಾರತೀಯರನ್ನು ಕಾನೂನುಬದ್ಧವಾಗಿ ಮೃತಪಟ್ಟಿದ್ದಾರೆಂದು ಘೋಷಿಸುವ ಪ್ರಕ್ರಿಯೆಯನ್ನು ಅಲ್ಲಿನ ಸರ್ಕಾರ ಆರಂಭಿಸಿದೆ ಎಂದು ವರದಿಯಾಗಿದೆ.
ಆಗಸ್ಟ್ 26ರಂದು ತ್ರಿಶೂಲಿ–ಭೋಟೆ ಕೋಶಿ ನದಿ ಪಾತ್ರದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದ ಬಳಿಕ ಇವರು ಕಣ್ಮರೆಯಾಗಿದ್ದರು. ನಾಪತ್ತೆಯಾದವರ ಪಟ್ಟಿಯನ್ನು ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟಿಸಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆ, ತೆಗೆದುಹಾಕುವಿಕೆ ಅಥವಾ ತಿದ್ದುಪಡಿಗಳಿದ್ದರೆ, ಕುಟುಂಬಸ್ಥರು ಡಿಸೆಂಬರ್ 2ರೊಳಗೆ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಆಕ್ಷೇಪಣೆಗಳ ಪರಿಶೀಲನೆ ಬಳಿಕ ಅಂತಿಮ ಪಟ್ಟಿ ಸಿದ್ಧಪಡಿಸಿ, ಔಪಚಾರಿಕ ಮರಣ ಘೋಷಣೆ ಹೊರಡಿಸಲಾಗುತ್ತದೆ. ನಂತರ ಮರಣ ಪ್ರಮಾಣಪತ್ರಗಳನ್ನು ಪಡೆಯುವ ಪ್ರಕ್ರಿಯೆ ಆರಂಭವಾಗಲಿದೆ.
ಸದ್ಯ ಮರಣ ಘೋಷಣೆಯ ಪ್ರಕ್ರಿಯೆ ಆರಂಭವಾಗಿದ್ದು, ಅಂತಿಮ ಘೋಷಣೆ ಇನ್ನೂ ಪೂರ್ಣಗೊಂಡಿಲ್ಲ.




