ಬೆಂಗಳೂರು: ಕರ್ನಾಟಕಕ್ಕೆ ಮತ್ತೆರಡು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಬರಲಿವೆಯಾ? 2027–28ನೇ ಶೈಕ್ಷಣಿಕ ವರ್ಷದಲ್ಲಿ ಪುತ್ತೂರು ಮತ್ತು ರಾಮನಗರದಲ್ಲಿ ತಲಾ ಒಂದು ಕಾಲೇಜು ಆರಂಭಿಸಲು ರಾಜ್ಯ ಸರ್ಕಾರ ಪ್ರಸ್ತಾವನೆ ಮುಂದಿಟ್ಟಿದೆ.
ಪುತ್ತೂರಿನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ನೀಡಲಾಗಿದೆ. ಕಾಲೇಜು ಕಟ್ಟಡಕ್ಕೂ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ರಾಮನಗರದಲ್ಲಿ ಮೂಲಸೌಕರ್ಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ಇನ್ನು ಕನಕಪುರದಲ್ಲಿ ಮೂಲಸೌಕರ್ಯದ ಕೊರತೆಯಿಂದ 2027–28ರಲ್ಲೂ ಕಾಲೇಜು ಆರಂಭವಾಗುವ ಸಾಧ್ಯತೆ ಕಡಿಮೆ. ಕೋಲಾರ ಮತ್ತು ವಿಜಯಪುರದಲ್ಲಿ 2028–29ಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಈ ಎರಡೂ ಪ್ರಸ್ತಾವನೆಗಳು ಶೀಘ್ರದಲ್ಲೇ ಸಚಿವ ಸಂಪುಟದ ಮುಂದೆ ಬರಲಿವೆ.




