ವಿಜಯನಗರ: ತುಂಗಭದ್ರಾ ಡ್ಯಾಂ ಗೇಟ್ ಕಟ್ ಆಗಿದ್ದು, ಅನ್ನದಾತರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಗ್ ಶಾಕ್ ಕೊಟ್ಟಿದ್ದಾರೆ.
ತುಂಗಭದ್ರಾ ಡ್ಯಾಂನ 33 ಗೇಟ್‌ಗಳ ಪೈಕಿ ಮಧ್ಯದಲ್ಲಿರುವ 19 ನೇ ಕ್ರಸ್ಟ್ ಗೇಟ್ ಚೈನ್ ಕಟ್ ಆಗಿದೆ. ಗೇಟ್ ರಿಪೇರಿ ಮಾಡಬೇಕಾದರೆ ಡ್ಯಾಂನಲ್ಲಿರುವ 65 ಟಿಎಂಸಿ ನೀರನ್ನು ಖಾಲಿ ಮಾಡಲೇಬೇಕಿದೆ.
ಈ ಬಗ್ಗೆ ಮಾಹಿತಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಡ್ಯಾಂನಲ್ಲಿರುವ 105 ಟಿಎಂಸಿ ನೀರಿನ ಪೈಕಿ 65 ಟಿಎಂಸಿ ನೀರನ್ನು ಹೊರಬಿಡಲೇಬೇಕಿದೆ. 65 ಟಿಎಂಸಿ ನೀರನ್ನು ಹೊರಬಿಟ್ಟರಷ್ಟೇ ಗೇಟ್ ರಿಪೇರಿ ಮಾಡಬಹುದಾಗಿದೆ ಎಂದರು.
105 ಟಿಎಂಸಿ ನೀರಿನ ಪೈಕಿ 65 ಟಿಎಂಸಿ ನೀರನ್ನು ಹೊರಬಿಟ್ಟರೆ ರೈತರು ಎರಡು ಬೆಳೆ ಬೆಳೆಯುವ ಬದಲು ಒಂದೇ ಬೆಳೆಗೆ ತೃಪ್ತಿಪಟ್ಟುಕೊಳ್ಳಲಿದ್ದಾರೆ.
ಈ ಭಾಗದಲ್ಲಿ ಹಲವು ಜಿಲ್ಲೆಗಳ ರೈತರು ತುಂಗಭದ್ರಾ ಜಲಾಶಯದ ನೀರನ್ನು ನಂಬಿ ತಮ್ಮ ಜಮೀನುಗಳಲ್ಲಿ ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದರು.
ಬೆಳೆಗಳ ಜೊತೆಗೆ ಜನರು ಹಾಗೂ ಜಾನುವಾರುಗಳಿಗೂ ವರ್ಷಪೂರ್ತಿ ಕುಡಿಯಲು ನೀರು ಸಿಗುತ್ತಿತ್ತು. ಈಗ ಗೇಟ್ ಮುರಿದು ಅಪಾರ ಪ್ರಮಾಣದ ನೀರು ಹೊರಬಂದ ಹಿನ್ನೆಲೆಯಲ್ಲಿ ರೈತರು ತೀವ್ರ ಬೇಸರದಲ್ಲಿದ್ದು, ಕೇವಲ ಒಂದು ಬೆಳೆಗೆ ಸಮಾಧಾನ ಪಡುವಂತಾಗಿದೆ.
ಇನ್ನು ಗೇಟ್ ಮುರಿದು ಹೋಗಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಹಳ್ಳಿಗಳಿಗೆ ಪ್ರವಾಹ ಭೀತಿ ಶುರುವಾಗಿದೆ. ಸಂಜೆಯ ವೇಳೆಗೆ 2 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರಬಿಡುವ ಸಾಧ್ಯತೆಗಳಿವೆ. ಇದರಿಂದ ನದಿ ಪಾತ್ರದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.