ಬೆಂಗಳೂರು: ತುಂಗಭದ್ರಾ ಜಲಾಶಯದ ಗೇಟ್ ಕಟ್ ಆಗಿ ಅಪಾರ ಪ್ರಮಾಣದ ನೀರನ್ನು ಹೊರಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ತುಂಗಭದ್ರಾ ಡ್ಯಾಂನ 19ನೇ ಗೇಟ್ ಚೈನ್ ಲಿಂಕ್ ಕಟ್ಟಾಗಿದೆ. ಜಲಾಶಯದಿಂದ ಹೊರಹರಿವು ಏರಿಕೆಯಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇದರಿಂದ ನದಿ ಪಾತ್ರದಲ್ಲಿ ವಾಸಿಸುತ್ತಿರುವ ರೈತರನ್ನು ಚಿಂತೆಗೀಡು ಮಾಡಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದ ರೈತರು, ಈ ಬಾರಿ ಮುಂಗಾರು ಮಳೆಯಾದ್ದರಿಂದ ಬಹಳ ಸಂತೋಷದಲ್ಲಿದ್ದರು. ಈ ಬಾರಿಯಾದರೂ ಉತ್ತಮ ಬೆಳೆ ತೆಗೆಯಬಹುದು ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಈಗ ಘಟನೆ ಸಂಭವಿಸಿದೆ. ಇದಕ್ಕೆಲ್ಲಾ ನೇರ ಕಾರಣ ರಾಜ್ಯ ಸರ್ಕಾರ. ಸರ್ಕಾರದ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ಆರೋಪ ಮಾಡಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, ನಿಮ್ಮ ದುರಾಡಳಿತದಿಂದ ಕನ್ನಡಿಗರಿಗೆ ಆದಷ್ಟು ಬೇಗ ಮುಕ್ತಿ ಬೇಕಿದೆ. ನಾಡಿನ ಅನ್ನದಾತರ ಶಾಪ ತಟ್ಟುವ ಮುನ್ನ ರಾಜೀನಾಮೆ ಕೊಟ್ಟು ತೊಲಗಿ ಎಂದು ಆಗ್ರಹಿಸಿದ್ದಾರೆ.