Mysore
22
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ತುಮಕೂರಿನಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ: 6 ಜನರ ಬಂಧನ

ತುಮಕೂರು: ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಪತ್ತೆಯಾದ ಮಕ್ಕಳ ಮಾರಾಟ ಜಾಲ ಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತವರು ಕ್ಷೇತ್ರ ತುಮಕೂರಿನಲ್ಲೇ ಮಕ್ಕಳ ಮಾರಾಟ ಜಾಲ ಪತ್ತೆಯಾಗಿದೆ.

ಗುಬ್ಬಿ ಠಾಣೆಯ ಪೊಲೀಸರು ಜಿಲ್ಲೆಯ ಮಕ್ಕಳ ಮಾರಾಟ ಜಾಲವನ್ನು ಭೇದಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತುಮಕೂರಿನ ಖಾಸಗಿ ನರ್ಸಿಂಗ್‌ ಕಾಲೇಜಿನ ಮ್ಯಾನೇಜರ್‌ ಮಹೇಶ್‌, ಆಸ್ಪತ್ರೆಯ ಸ್ಟಾಪ್‌ ನರ್ಸ್‌ಗಳಾದ ಪೂರ್ಣಿಮಾ ಹಾಗೂ ಸೌಜನ್ಯ, ಚಿಕ್ಕನಾಯಕನಹಳ್ಳಿ ಮೂಲದ ಫಾರ್ಮಸಿಸ್ಟ್‌ ಮಹಬೂಬ್‌ ಷರೀಪ್‌, ಟ್ಯಾಟು ಹಾಕುತ್ತಿದ್ದ ಕೆ.ಎನ್.ರಾಮಕೃಷ್ಣಪ್ಪ, ಹನುಮಂತರಾಜು ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ಕಾರು, 50 ಸಾವಿರ ನಗದು, 4 ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಜೂನ್.‌9ರಂದು ಗುಬ್ಬಿ ಪಟ್ಟಣದಲ್ಲಿ 11 ತಿಂಗಳ ರಾಕಿ ಎಂಬ ಗಂಡು ಮಗು ಅಪಹರಣವಾಗಿತ್ತು. ಪ್ರಕರಣ ಸಂಬಂಧ ಗುಬ್ಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಗು ಅಪಹರಣ ಪ್ರಕರಣವನ್ನು ಬೆನ್ನತ್ತಿದ್ದ ಪೊಲೀಸರಿಗೆ ಒಂದೇ ಗ್ಯಾಂಗ್‌ನಿಂದ 9 ಮಕ್ಕಳನ್ನು ಮಾರಾಟ ಮಾಡಿರುವ ಮಾಹಿತಿ ಲಭ್ಯವಾಗಿದೆ. ಈ ಮಾಹಿತಿ ಆಧರಿಸಿ ಆರೋಪಿಗಳನ್ನು ಬೆನ್ನತ್ತಿದ ಪೊಲೀಸರಿಗೆ ಇದು ಮಕ್ಕಳ ಮಾರಾಟ ಜಾಲ ಎಂಬುದು ಗೊತ್ತಾಗಿದೆ. ಈ ಜಾಲದಲ್ಲಿ ತುಮಕೂರಿನ ಖಾಸಗಿ ಆಸ್ಪತ್ರೆ ಸಿಬ್ಬಂದಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ.

ಆರೋಪಿಗಳು ಈ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂದು ಖಚಿತವಾಗುತ್ತಿದ್ದಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಸದ್ಯ 9 ಮಕ್ಕಳ ಪೈಕಿ 4 ಮಕ್ಕಳನ್ನು ದತ್ತು ಸ್ವೀಕಾರ ಕೇಂದ್ರದಲ್ಲಿ ಇರಿಸಲಾಗಿದ್ದು, ಮಾರಾಟವಾಗಿದ್ದ ಒಂದು ಮಗು ಮರಳಿ ಪೋಷಕರ ಮಡಿಲು ಸೇರಿದೆ. ರಾಜ್ಯದಲ್ಲಿ ಮಕ್ಕಳ ಮಾರಾಟ ಜಾಲ, ಭ್ರೂಣಹತ್ಯೆ ಗ್ಯಾಂಗ್‌ ಆಕ್ಟೀವ್‌ ಆಗಿದ್ದು ಜನತೆಯಲ್ಲಿ ಭಾರೀ ಭಯ ಮೂಡಿಸಿದೆ.

Tags:
error: Content is protected !!