ಬೆಂಗಳೂರು: ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ನಗರದ ಹಲವು ಬಿಲ್ಡರ್ ಹಾಗೂ ಉದ್ಯಮಿಗಳ ನಿವಾಸ ಮತ್ತು ಕಚೇರಿಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಈ ಕುರಿತು ಇಂದು(ನ.27) ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಆಸ್ತಿ ತೆರಿಗೆ ಪಾವತಿಸಿದೇ ಇರುವ ಕಾರಣ ಕತ್ರಿಗುಪ್ಪೆ ಮತ್ತು ವೈಯಾಲಿಕಾವಲ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಿಲ್ಡರ್ ಹಾಗೂ ಉದ್ಯಮಿಗಳಿರುವ ನಿವಾಸ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಬಳಿಕ ಆಸ್ತಿ ತೆರಿಗೆಗೆ ಸಂಬಂಧಿಸಿದ ದಾಖಲೆ ಪತ್ರಗಳ ಶೋಧ ಕಾರ್ಯಕ್ಕೆ ತೊಡಗಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ವೇಳೆ ಐಟಿ ಅಧಿಕಾರಿಗಳು ಕತ್ರಿಗುಪ್ಪೆಯ ಉದ್ಯಮಿ ಶ್ರೀನಿವಾಸ್ ಎಂಬುವವರ ನಿವಾಸದ ಮೇಲೆ ದಾಳಿ ಮಾಡಿದ್ದು, ಪ್ರಮುಖ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇದೇ ನವೆಂಬರ್ 7 ರಂದು ಬೆಂಗಳೂರಿನ ಕೆಲ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು. ಇದೀಗ ಮತ್ತೊಮ್ಮೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.