Mysore
22
clear sky

Social Media

ಬುಧವಾರ, 21 ಜನವರಿ 2026
Light
Dark

ಕ್ವಾಂಟಮ್‌ ಸಿಟಿ ಅಭಿವೃದ್ದಿ ಹಾಗೂ ಸಹಭಾಗಿತ್ವಕ್ಕೆ ಸ್ವಿಟ್ಜರ್ಲೆಂಡ್‌ ಕಂಪನಿಗಳು ಹಾಗೂ ಸಂಶೋಧನಾ ಸಂಸ್ಥೆಗಳ ಒಲವು: ಸಚಿವ ಭೋಸರಾಜು

ಬೆಂಗಳೂರು: ಬೆಂಗಳೂರು ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವಂತಹ ಕ್ವಾಂಟಮ್‌ ಸಿಟಿಯಲ್ಲಿ ಸಹಭಾಗಿತ್ವಕ್ಕೆ, ಸ್ವಿಟ್ಜರ್ಲೆಂಡ್‌ ಕಂಪನಿಗಳು ಹಾಗೂ ಕ್ವಾಂಟಮ್‌ ಕ್ಷೇತ್ರದ ಸಂಶೋಧನೆಯಲ್ಲಿ ಪ್ರಮುಖವಾಗಿರುವಂತಹ ಸಂಸ್ಥೆಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಭೋಸರಾಜು ತಿಳಿಸಿದ್ದಾರೆ.

ಇಂದು ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಿಟ್ಜರ್ಲೆಂಡ್‌ ಪ್ರವಾಸದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

ಕರ್ನಾಟಕ ರಾಜ್ಯ ಸರ್ಕಾರ ಬೆಂಗಳೂರು ನಗರವನ್ನು ವಿಶ್ವದ ಕ್ವಾಂಟಮ್‌ ಕ್ಷೇತ್ರದ ಕೇಂದ್ರಬಿಂದುವನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ನಡೆದ ದೇಶದ ಮೊದಲ ಕ್ವಾಂಟಮ್‌ ಸಮಾವೇಶದಲ್ಲಿ ಘೋಷಿಸಿದಂತೆ ಈಗಾಗಲೇ ಕ್ವಾಂಟಮ್‌ ಸಿಟಿಗೆ ಭೂಮಿಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ.

ಈ ಸಿಟಿಯ ಅಭಿವೃದ್ದಿಗಾಗಿ ಕ್ವಾಂಟಮ್‌ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ವಿಶ್ವದ ಪ್ರಮುಖ ಸಂಸ್ಥೆಗಳಾದ ಇಟಿಹೆಚ್‌ ಜ್ಯೂರಿಚ್‌, ಸೆರಿ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಯಿತು. ಕರ್ನಾಟಕ ರಾಜ್ಯದಲ್ಲಿ ಕ್ವಾಂಟಮ್‌ ಪರಿಣಿತ ಮಾನವ ಸಂಪನ್ಮೂಲ ಅಭಿವೃದ್ದಿಗಾಗಿ ಐಐಎಸ್‌ಸಿ ಜೊತೆಗೂಡಿ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ. ನಮ್ಮ ರಾಜ್ಯದಲ್ಲಿ ಪರಿಣಿತ ಮಾನವ ಸಂಪನ್ಮೂಲ ಲಭ್ಯವಿದ್ದು, ಹೊಸ ಸಂಶೋಧನೆಗಳನ್ನು ಕೈಗೊಳ್ಳಲು ಉತ್ತಮ ಪರಿಸರವಿದೆ. ಈ ಹಿನ್ನಲೆಯಲ್ಲಿ ಸಂಶೋಧನಾ ಯೋಜನೆಗಳಲ್ಲಿ ಸಹಕರಿಸುವಂತೆ ನಮ್ಮ ಮನವಿಗೆ ಇಟಿಎಚ್ ಜ್ಯೂರಿಕ್ ಮಂಡಳಿಯ ಅಧ್ಯಕ್ಷರಾದ ಡಾ. ಮೈಕೇಲ್ ಹೆಂಗಾರ್ಟ್ನರ್ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಹೇಳಿದರು.

ಇದನ್ನೂ ಓದಿ:-ರಫೇಲ್‌ ಫೈಟರ್‌ ಜೆಟ್‌ ಯುದ್ಧ ವಿಮಾನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾರಾಟ

ಐನ್‌ಸ್ಟೀನ್‌ ಅವರು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ಇಟಿಎಚ್ ಜ್ಯೂರಿಕ್ ಸಂಸ್ಥೆಗೆ ಭೇಟಿ ನೀಡಿ ,ಸುಪರ್‌ ಕಂಡಕ್ಟಿಂಗ್ ಕ್ಯೂಬಿಟ್ ಮತ್ತು ಟ್ರಾಪ್ಡ್ ಐಯಾನ್ ಸಿಸ್ಟಮ್ಸ್‌ಗಳ ಕುರಿತ ಸಂಶೋಧನೆಯಲ್ಲಿ ಇಪ್ಪತ್ತು ವರ್ಷಗಳಿಂದ ಪಯೋನಿಯರ್‌ಗಳಾಗಿ ಗುರುತಿಸಿಕೊಂಡಿರುವಂತಹ, ಇಟಿಎಚ್ ಜ್ಯೂರಿಕ್ ಕ್ವಾಂಟಮ್ ಸೆಂಟರ್‌ ನಿರ್ದೇಶಕರುಗಳಾದ ವಿಶ್ವವಿಖ್ಯಾತ ಪ್ರೊ. ಆಂಡ್ರಿಯಾಸ್ ವಾಲ್ರಾಫ್ ಹಾಗೂ ಪ್ರೊ. ಜೊನಥನ್ ಹೋಮ್ ಮತ್ತು ಪ್ರೊ. ಕ್ಲಾಸ್ ಎನ್ಸ್‌ಸ್ಲಿನ್ ಅವರನ್ನು ಮುಂದಿನ ಕ್ವಾಂಟಮ್‌ ಇಂಡಿಯಾ ಸಮ್ಮೇಳನದಲ್ಲಿ ಭಾಗವಹಿಸುವಂತೆ ಅಹ್ವಾನ ನೀಡಿದ್ದೇವೆ.

ಇಟಿಎಚ್ ಜ್ಯೂರಿಕ್ ವಿಶ್ವವಿದ್ಯಾಲಯದ ಪ್ರಯೋಗಾಲಯಗಳಲ್ಲಿ ಸಂಶೋಧಿಸಲಾದ ಹಲವಾರು ಸಂಶೋಧನೆಗಳು ಸ್ಟಾರ್ಟಪ್‌ಗಳಾಗಿ ಬೆಳೆದಿವೆ. ಇಂತಹ ಪರಿಸರವನ್ನು ಕ್ವಾಂಟಮ್‌ ಸಿಟಿಯಲ್ಲಿ ಅಳವಡಿಸುವ ನಿಟ್ಟಿನಲ್ಲಿ ಹಾಗೂ ಸಹಭಾಗಿತ್ವದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಸಚಿವರು ತಿಳಿಸಿದರು.

Tags:
error: Content is protected !!