ಬೆಂಗಳೂರು : ಮಂಡ್ಯ, ಮೈಸೂರು,ಚಾಮರಾಜನಗರ, ಹಾಸನ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಇತರ ಜಿಲ್ಲೆಗಳಲ್ಲಿ ನವಂಬರ್ 1ರಿಂದ ಕಬ್ಬು ನುರಿಸುವಿಕೆ ಆರಂಭಿಸಲು ಕಬ್ಬು, ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಮಾತ್ರ ಜೂನ್ 22ರಿಂದ ಕಬ್ಬು ನುರಿಸುವಿಕೆ ಆರಂಭಿಸಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಈ ಬಾರಿ ಮಳೆ ಉತ್ತಮವಾಗಿದ್ದು, ಕಬ್ಬು ಇಳುವರಿ ಕೂಡಾ ಚೆನ್ನಾಗಿದೆ. ಹೀಗಾಗಿ ಮುಂಚಿತವಾಗಿಯೇ ಕಬ್ಬು ನುರಿಸುವಿಕೆ ಆರಂಭಿಸುವ ಅಭಿಪ್ರಾಯಕ್ಕೆ ರೈತ ಮುಖಂಡರನ್ನೊಳಗೊಂಡ ಕಬ್ಬು ನಿಯಂತ್ರಣ ಮಂಡಳಿ ಸದಸ್ಯರು ಸಹಮತ ವ್ಯಕ್ತಪಡಿಸಿದರು.
ತೂಕದಲ್ಲಿ ವಂಚನೆ ತಡೆ, ಕಬ್ಬು ಪೂರೈಕೆ ಮಾಡಿದ ರೈತರಿಗೆ ನಿಗದಿತ ಸಮಯದಲ್ಲಿ ಬಿಲ್ ಪಾವತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಕಳೆದ ಮೂರು ವರ್ಷದ ಹಂಗಾಮಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬಿಲ್ ಪಾವತಿಯಾಗಿದೆ. ಕಬ್ಬು ಪೂರೈಕೆ ಮಾಡಿದ 14 ದಿನಗಳೊಳಗೆ ಬಿಲ್ ಪಾವತಿ ಮಾಡಬೇಕು ಎಂಬ ನಿಯಮ ಇದೆ. ಕೆಲ ಕಾರ್ಖಾನೆಗಳು ವಿಳಂಬ ಮಾಡಿರಬಹುದು ಆದರೆ ಪೂರ್ಣ ಪ್ರಮಾಣದಲ್ಲಿ ಬಿಲ್ ಪಾವತಿ ಮಾಡಿವೆ. ಕಬ್ಬಿನ ಬಾಕಿ ಬಿಲ್ ಪಾವತಿ ವಿಚಾರದಲ್ಲಿ ಕರ್ನಾಟಕ ರಾಜ್ಯ ಇತರೆ ಕಬ್ಬು ಬೆಳೆಯುವ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
2025-26ನೇ ಸಾಲಿನ ಹಂಗಾಮಿಗೆ ಎಫ್‌ಆರ್‌ಪಿ ದರವನ್ನು ಪ್ರತಿಶತ 9.5ರಷ್ಟು ಸಕ್ಕರೆ ಇಳುವರಿಗೆ ಪ್ರತಿ ಮೆಟ್ರಿಕ್ ಟನ್‌ಗೆ ರೂ. 4440 ಅಥವಾ ರೂ. 4200 ನಿಗದಿಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕಳೆದ ಜನವರಿಯಲ್ಲೇ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಕೇಂದ್ರ ಸರ್ಕಾರ ಪ್ರತಿಶತ 10.25 ಸಕ್ಕರೆ ಇಳುವರಿಗೆ ಪ್ರತಿಟನ್‌ಗೆ ರೂ 3,550, ಪ್ರತಿಶತ 10.25ಕ್ಕೂ ಮೇಲ್ಪಟ್ಟ ಇಳುವರಿಗೆ ನಂತರದ ಶೇಕಡ 1ರಷ್ಟು ಇಳುವರಿಗೆ ಪ್ರತಿ ಮೆಟ್ರಿಕ್ ಟನ್‌ಗೆ ರೂ 346 ಹೆಚ್ಚುವರಿ ಬೆಲೆ ನಿಗದಿಪಡಿಸಿದೆ. ಪ್ರತಿಶತ 10.25ಕ್ಕಿಂತ ಕಡಿಮೆ ಹಾಗೂ ಪ್ರತಿಶತ 9.5ಕ್ಕೆ ಮೇಲ್ಪಟ್ಟ ಇಳುವರಿ ಹೊಂದಿರುವ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ ರೂ 346 ಸರಾಸರಿಯಂತೆ ನ್ಯಾಯ ಮತ್ತು ಲಾಭದಾಯಕ ಬೆಲೆ ಕಡಿಮೆ ಮಾಡಬೇಕು. ಪ್ರತಿಶತ 9.5 ಅಥವಾ ಪ್ರತಿಶತ 9.50ಕ್ಕಿಂತ ಕಡಿಮೆ ಇಳುವರಿ ಹೊಂದಿರುವ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿ ಮೆಟ್ರಿಕ್ ಟನ್‌ಗೆ ರೂ 3290.5 ನ್ಯಾಯ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸಿದೆ ಎಂದು ಸಚಿವರು ವಿವರಿಸಿದರು.
ತೂಕದಲ್ಲಿನ ವಂಚನೆ ತಡೆಗೆ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಅನಲಾಗ್ ತೂಕದ ಯಂತ್ರಗಳ ಬದಲಿಗೆ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಕೇವಲ ನಾಲ್ಕು ಕಾರ್ಖಾನೆಗಳಲ್ಲಿ ಮಾತ್ರ ಬಾಕಿ ಇದೆ. ಈ ಹಂಗಾಮು ಆರಂಭದೊಳಗೆ ಬಾಕಿ ಇರುವ ಸಕ್ಕರೆ ಕಾರ್ಖಾನೆಗಳಲ್ಲೂ ಡಿಜಿಟಲ್ ತೂಕದ ಯಂತ್ರ ಅಳವಡಿಸಬೇಕು ಎಂದು ಸಚಿವರು ಮಾಪನ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.