Mysore
29
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಸಕ್ಕರೆ ಕೆಜಿಗೆ 40 ರೂ.ಗೆ ಹೆಚ್ಚಳ ; ನಮ್ಮ ಮನವಿ ಮೇರೆಗೆ ಏರಿಕೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕಬ್ಬು ಬೆಳೆಗಾರರ ಬೇಡಿಕೆ ಹಿನ್ನೆಲೆಯಲ್ಲಿ ತಾವು ದೆಹಲಿಗೆ ಹೋಗಿ ಮನವಿ ಸಲ್ಲಿಸಿದ ಮೇಲೆ ಸಕ್ಕರೆ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಕೆಜಿ ಸಕ್ಕರೆಗೆ ೪೧ ರೂಪಾಯಿಗೆ ದರ ಹೆಚ್ಚಿಸುವಂತೆ ತಾವು ಮನವಿ ಸಲ್ಲಿಸಿದ್ದು, ಕೇಂದ್ರ ಸರ್ಕಾರ ರೂ. ೪೦ ರೂ.ಗೆ ಹೆಚ್ಚಳ ಮಾಡಿದೆ ಎಂದರು.

ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಪ್ರಕಾರ ದರ ಹೆಚ್ಚಳವಾಗಿದೆ. ಸುಮಾರು ಏಳೆಂಟು ವರ್ಷಗಳಿಂದ ಸಕ್ಕರೆಯ ಬೆಲೆ ಪರಿಷ್ಕರಣೆಯಾಗಿಲ್ಲ. ಪ್ರತಿ ಕೆ.ಜಿ.ಗೆ ೩೧ ರೂಪಾಯಿಗಳಿವೆ. ಅದನ್ನು ೪೧ ರೂಪಾಯಿಗೆ ಹೆಚ್ಚಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದರು.

ಕಾರ್ಖಾನೆಗಳ ಬೇಡಿಕೆ ಈಡೇರಿಕೆ
ಇತ್ತೀಚಿಗೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ನಾನಾ ಭಾಗಗಳಲ್ಲಿ ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ನಡೆಸಿದರು. ಪ್ರತಿಭಟನೆಗೆ ಮಣಿದ ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಸಭೆ ನಡೆಸಿ, ಕಬ್ಬಿನ ದರ ಪರಿಷ್ಕರಣೆಗೆ ಪ್ರಯತ್ನಿಸಿತ್ತು. ಶೇ. ೧೧.೨೫ರಷ್ಟು ಇಳುವವರಿ ಇರುವ ಕಬ್ಬಿಗೆ ಸಕ್ಕರೆ ಕಾರ್ಖಾನೆಗಳಿಂದ ೩೨೦೦ ದರ ನೀಡುವುದು. ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳು ತಲಾ ೫೦ ರೂಪಾಯಿಗಳನ್ನು ಸೇರಿಸಿ ಹೆಚ್ಚುವರಿಯಾಗಿ ನೂರು ರೂಪಾಯಿಗಳನ್ನು ಒಳಗೊಂಡು ೩,೩೦೦ ರೂ. ಪ್ರತಿ ಟನ್‌ಗೆ ರೈತರಿಗೆ ನೀಡಲು ನಿರ್ಧರಿಸಲಾಗಿತ್ತು.

ಸಭೆಯ ವೇಳೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸರಕಾರಕ್ಕೆ ತಮ ಸಮಸ್ಯೆಗಳ ಸರಮಾಲೆಯನ್ನು ಮುಂದಿಟ್ಟಿದ್ದರು. ಸಕ್ಕರೆ ಬೆಲೆ ಹೆಚ್ಚಳವಾಗಿಲ್ಲ, ವಿದ್ಯುತ್ ಖರೀದಿಗೆ ಯೋಗ್ಯ ದರ ನೀಡುತ್ತಿಲ್ಲ, ಮೊಲಾಸಿಸ್, ಸ್ಪಿರಿಟ್ ಮತ್ತು ಎಥೆನಾಲ್ ಖರೀದಿಯ ಕೋಟಾವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದೆ. ಅದನ್ನು ರಾಜ್ಯದ ಮಟ್ಟಿಗೆ ಹೆಚ್ಚಿಸಬೇಕು ಎಂದು ಕಾರ್ಖಾನೆಗಳ ಮಾಲೀಕರು ಒತ್ತಡ ಹಾಕಿದ್ದರು.

ಈ ಎಲ್ಲಾ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿ ಅವರ ಗಮನಕ್ಕೆ ತಂದಿದ್ದರು. ಜೊತೆಗೆ ನೆರೆ ನೆರೆಹಾವಳಿಗೆ ಪರಿಹಾರ ಸೇರಿದಂತೆ ಇತರ ಐದು ಪ್ರಮುಖ ಬೇಡಿಕೆಗಳನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಸಿದ್ದರಾಮಯ್ಯ ಅವರ ಭೇಟಿ ಫಲಪ್ರದವಾಗಿದ್ದು ಸಕ್ಕರೆಯ ಬೆಲೆ ಹೆಚ್ಚಳವಾಗಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗಲಿದ್ದು, ಸಕ್ಕರೆ ಕಾರ್ಖಾನೆಗಳು ಲಾಭ ಮಾಡಿಕೊಳ್ಳಲಿವೆ. ಅದನ್ನು ರೈತರಿಗೆ ವರ್ಗಾಯಿಸಲಾಗುವುದೇ ಅಥವಾ ಇಲ್ಲವೇ ಎಂಬ ಕುತೂಹಲ ಕೆರಳಿದೆ. ರೈತರ ಬೇಡಿಕೆಯಂತೆ ಈಗಲೂ ನ್ಯಾಯಯುತ ಬೆಲೆ ಸಿಗದೇ ಇದ್ದರೆ, ಮತ್ತೆ ಕಬ್ಬು ಬೆಳೆಗಾರರು ಬೀದಿಗೆ ಇಳಿಯುವ ಸಾಧ್ಯತೆ ಇದೆ.

Tags:
error: Content is protected !!