ಹೊಸ ಮಾರ್ಗಸೂಚಿ ಬಿಡುಗಡೆಗೆ ಆರೋಗ್ಯ ಇಲಾಖೆ ಚಿಂತನೆ
ಮೈಸೂರು : ಚೆನ್ನಾಗಿ ಕಾಣಿಸ್ಬೇಕು, ನಮ್ಮ ಚರ್ಮ, ಕೂದಲು, ಮೈಬಣ್ಣ ಎಲ್ಲವೂ ಆಕರ್ಷಕವಾಗಿ ಇರಬೇಕು ಎಂದು ಅನೇಕರು ಬ್ಯೂಟಿ ಪಾರ್ಲರ್‌ಗಳಿಗೆ ಹೋಗುತ್ತಾರೆ. ಆದರೆ, ಅನೇಕರು ಪರಿಣತರಲ್ಲದವರಿಂದ ಚಿಕಿತ್ಸೆ ಪಡೆದು ಪ್ರಾಣಕ್ಕೆ ಸಂಚಕಾರ ತಂದು ಕೊಳ್ಳುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಇದೀಗ ಬ್ಯೂಟಿ ಪಾರ್ಲರ್, ಸಲೂನ್ ಸೆಂಟರ್ಗಳಿಗೆ ಕಠಿಣ ನಿಯಮಗಳನ್ನೊಳಗೊಂಡ ಮಾರ್ಗಸೂಚಿ ಬಿಡುಗಡೆಗೆ ಸಿದ್ಧತೆ ನಡೆಸಿದೆ.
ಅನೇಕ ಸಲೂನ್ಗಳಲ್ಲಿ, ಬ್ಯೂಟಿ ಪಾರ್ಲರ್‌ಗಳಲ್ಲಿ ಪ್ರಮಾಣಪತ್ರ ಇಲ್ಲದವರು ಕೂಡಾ ಕೆಲಸ ಮಾಡುತ್ತಿದ್ದಾರೆ. ಫೇಶಿಯಲ್ ಸೇರಿದಂತೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಚಿಕಿತ್ಸೆಗಳನ್ನು ಜನರು ಪಡೆಯುತ್ತಾರೆ. ಆದರೆ, ಅದೆಷ್ಟೋ ಕಡೆಗಳಲ್ಲಿ ಪರಿಣತರಿಲ್ಲದೆಯೇ, ಪಾರ್ಲರ್ ಹೆಸರಿನಲ್ಲಿ ಶಾಪ್ಗಳು ನಾಯಿಕೊಡೆಗಳಂತೆ ಎತ್ತಿವೆ. ಇವುಗಳಲ್ಲಿ ಯಾವುದು ನಕಲಿ, ಯಾವುದು ಅಸಲಿ ಎಂಬುದು ತಿಳಿಯದೆ ಜನರು ಚಿಕಿತ್ಸೆಗೆಂದು ತೆರಳುತ್ತಾರೆ. ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಅನೇಕ ಕಡೆ ಬ್ಯೂಟಿ ಪಾರ್ಲರ್, ಸಲೂನ್ ಸೆಂಟರ್, ಸ್ಕಿನ್ ಸೆಂಟರ್ ಎಂದು ಬೇಕಾಬಿಟ್ಟಿ ಚಿಕಿತ್ಸೆ ನೀಡುವ ಅನೇಕ ಶಾಪ್ಗಳಿವೆ. ಕೆಲವು ಬ್ಯೂಟಿ ಪಾರ್ಲರ್ಗಳು ಹಾನಿಕಾರಕ ಸ್ಟೀರಾಯ್ಡ್ ಬೇಸ್ಡ್ ಔಷಧ, ಕ್ರೀಮ್ ಹಾಗೂ ಕಾಸ್ಮೆಟಿಕ್ಸ್ ಬಳಕೆ ಮಾಡಿಕೊಂಡು ಜನರ ಆರೋಗ್ಯಕ್ಕೆ ಸಂಚಾಕರ ತರುತ್ತಿವೆ.
ಸಲೂನ್ ಸೆಂಟರ್ಗಳಲ್ಲಿಯೂ ಕೂಡಾ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಪ್ರಾಕ್ಟಿಸ್ಗಳನ್ನು ಮಾಡಿ ಜನರ ಜೀವಕ್ಕೆ ಕುತ್ತು ತರುತ್ತಿದ್ದಾರೆ. ಎಂಬಿಬಿಎಸ್ ಪ್ರಾಕ್ಟೀಸ್ ಮಾಡದೇ ಬ್ಯೂಟಿ ಕ್ಲಿನಿಕ್ಗಳಲ್ಲಿ ಕೆಲವರು ರಾಸಾಯನಿಕ ಚಿಕಿತ್ಸೆ ನೀಡುತ್ತಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಯಲ್ಲಿ MD, DNB, DVL, DDV ಹಾಗೂ Mch, ಪ್ಲಾಸ್ಟಿಕ್ ಸರ್ಜರಿ ಪಿ.ಜಿ ಅರ್ಹತೆ ಇಲ್ಲದೇ ಚಿಕಿತ್ಸೆ ಕೊಡುತ್ತಿದ್ದಾರೆ.
ಇದರಿಂದ ಅನೇಕರು ಚರ್ಮ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪ್ರಾಣಕ್ಕೂ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕುವುದಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ಸಲೂನ್ ಸೆಂಟರ್, ಮಸಾಜ್ ಸೆಂಟರಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆಗೆ ಮುಂದಾಗಿದೆ. ಸಾಕಷ್ಟು ದೂರುಗಳು ಬಂದ ಕಾರಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಡರ್ಮಟಾಲಿಸ್ಟ್ ಅಸೋಸಿಯೇಷನ್ ಇಲಾಖೆಯ ನಿರ್ಧಾರವನ್ನು ಸ್ವಾಗತಿಸಿದೆ. ಈ ಹಿಂದೆಯೂ ಕೂಡಾ ಅನೇಕ ಬಾರಿ ಆರೋಗ್ಯ ಇಲಾಖೆಗೆ ಅಸೋಸಿಯೇಷನ್‌ನಿಂದ ದೂರನ್ನು ನೀಡಲಾಗಿತ್ತು. ಮಾರ್ಗಸೂಚಿಯಿಂದ ಜನರಿಗೆ ಹಣ ಉಳಿಯುವುದರ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದು ಚರ್ಮ ರೋಗ ತಜ್ಞರ ಸಂಘಟನೆಯ ಸದಸ್ಯ ಜಗದೀಶ್ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಮಾರ್ಗಸೂಚಿಗೆ ಎಲ್ಲಾ ರೀತಿಯ ತಯಾರಿ ಮಾಡಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಲೂನ್, ಬ್ಯೂಟಿಪಾರ್ಲರ್‌ಗಳಿಗೆ ನಿಯಮ ಜಾರಿಯಾಗಲಿದೆ. ಉಲ್ಲಂಘಿಸಿದಲ್ಲಿ, ಪರವಾನಗಿ ರದ್ದು ಮಾಡಲು ಕೂಡಾ ಚಿಂತನೆ ನಡೆಯುತ್ತಿದೆ.





