Mysore
15
few clouds

Social Media

ಗುರುವಾರ, 22 ಜನವರಿ 2026
Light
Dark

ಕಲ್ಲು ತೂರಾಟ ಯಾರೇ ಮಾಡಿದ್ದರೂ ಖಂಡನೀಯ, ಶಿಕ್ಷಾರ್ಹ ಅಪರಾಧ: ಸಚಿವ ಎಚ್‌ಸಿಎಂ

ಬೆಂಗಳೂರು: ಸಾರ್ವಜನಿಕ ಜೀವನದಲ್ಲಿ ಇರುವವರು ರಾಜಕೀಯದಲ್ಲಿ ಧರ್ಮ ತಂದು ಜನರ ನೆಮ್ಮದಿಗೆ ಧಕ್ಕೆ ತರುವುದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಆಕ್ಷೇಪಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತೀಯ ತೀವ್ರವಾದಿಗಳು ಯಾವುದೇ ಧರ್ಮದಲ್ಲಿದ್ದರೂ ಖಂಡನೀಯ. ಧಾರ್ಮಿಕ ಆಚರಣೆಯನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡಿ ಗೊಂದಲ ಮೂಡಿಸುವುದು ಸರಿಯಲ್ಲ ಎಂದರು.

ಸಾರ್ವಜನಿಕ ಜೀವನದಲ್ಲಿ ಇರುವವರು ಅಳೆದು, ತೂಗಿ ಮಾತನಾಡಬೇಕು. ಕಲ್ಲು ತೂರಾಟವನ್ನು ಯಾರೇ ಮಾಡಿದ್ದರೂ ಖಂಡನೀಯ, ಶಿಕ್ಷಾರ್ಹ ಅಪರಾಧ. ಆ ರೀತಿ ಚಟುವಟಿಕೆಗಳನ್ನು ಸರ್ಕಾರ ಉಕ್ಕಿನ ಕೈಗಳಿಂದ ನಿಯಂತ್ರಿಸಲಿದೆ ಎಂದರು.

ಮೂಲಭೂತವಾದಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಾಗುತ್ತದೆ ಎಂಬ ಧೈರ್ಯಕ್ಕೆ ದುಷ್ಕರ್ಮಿಗಳು ಗಲಭೆ ಮಾಡುತ್ತಿದ್ದಾರೆ ಎಂಬ ವಾದವನ್ನು ಅಲ್ಲಗಳೆದ ಮಹದೇವಪ್ಪ ಅವರು, ಕ್ರಿಮಿನಲ್‌ಗಳ ವಿರುದ್ಧದ ಯಾವ ಪ್ರಕರಣವನ್ನೂ ನಮ್ಮ ಸರ್ಕಾರ ಹಿಂದೆ ಪಡೆದಿಲ್ಲ. ಬಿಜೆಪಿಯವರು ಧರ್ಮದ ಆಧಾರದ ಮೇಲೆ ಪ್ರಕರಣಗಳನ್ನು ಹಿಂಪಡೆದಿದ್ದಾರೆ ಎಂದು ತಿರುಗೇಟು ನೀಡಿದರು.

ಗಲಭೆ ಮಾಡುವವರ ವಿರುದ್ಧದ ಕೇಸುಗಳನ್ನು ಹಿಂದೆ ತೆಗೆದುಕೊಂಡಿಲ್ಲ. ಎಲ್ಲಾ ಸರ್ಕಾರಗಳು ಸಾರ್ವಜನಿಕ ಹೋರಾಟದಲ್ಲಿ ಭಾಗವಹಿಸಿದ್ದವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುತ್ತವೆ. ನಮ್ಮ ಸರ್ಕಾರವೂ ಅದೇ ರೀತಿ ಕ್ರಮ ಕೈಗೊಂಡಿದೆ ಎಂದರು.

ಮತೀಯ ಶಕ್ತಿಗಳಿಗೆ ಅಭಿವೃದ್ಧಿ ಬೇಕಿಲ್ಲ. ಜನರ ನೆಮ್ಮದಿ ಹಾಳು ಮಾಡುವುದೇ ಅವರ ಮೂಲ ಉದ್ದೇಶ, ಸೌಹಾರ್ದತೆಗೆ ಧಕ್ಕೆ ತರುವುದರಿಂದ ಜನರ ನೆಮ್ಮದಿಗೆ ಭಂಗ ತರುವುದರಿಂದ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಯತ್ನಿಸಲಾಗುತ್ತದೆ ಎಂದರು.

ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್‍ಗೆ ಅವಕಾಶ ನೀಡಬಾರದು ಎಂದು ಬಿಜೆಪಿ ಮಾಜಿ ಸಂಸದ ಹೈಕೋರ್ಟ್ ಮೆಟ್ಟಿಲೇರಿರುವುದು ಸರಿಯಲ್ಲ. ನಾಡಹಬ್ಬದಂತಹ ಸಂದರ್ಭದಲ್ಲಿ ಧರ್ಮ, ಜಾತಿ ರಾಜಕೀಯ ಬೆರೆಸಬಾರದು. ನಾಲ್ವಡಿ ಕೃಷ್ಣರಾಜ ಒಡೆಯರ್ ನೇತೃತ್ವದಲ್ಲಿ ಆಧುನಿಕ ಮೈಸೂರು ನಿರ್ಮಾಣ ಮಾಡುವುದರಲ್ಲಿ ಮಿರ್ಜಾ ಇಸಾಯಿಲ್ ಮಹತ್ವದ ಕೊಡುಗೆ ನೀಡಿದ್ದಾರೆ. ಟಿಪ್ಪು ಸುಲ್ತಾನ್ ಆಡಳಿತದಲ್ಲಿ ಪೂರ್ಣಯ್ಯ ದಿವಾನರಾಗಿದ್ದರೂ, ನಮ್ಮ ನಾಡು ಮೊದಲಿನಿಂದಲೂ ಸೌಹಾರ್ದತೆಗೆ ಹೆಸರುವಾಸಿಯಾಗಿದೆ ಎಂದರು.

ಪತ್ರಕರ್ತ, ಸಂಸದರಾಗಿದ್ದ ಪ್ರತಾಪ್ ಸಿಂಹ ತೀವ್ರಗಾಮಿಯಾಗಿ ಬದಲಾಗಿರುವುದು ದುರಾದೃಷ್ಟಕರ. ಬಾನು ಮುಷ್ತಾಕ್ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತಂದುಕೊಟ್ಟಿಲ್ಲವೇ ? ದಸರಾ ಒಂದು ಧರ್ಮಕ್ಕೆ ಮಾತ್ರ ಸೀಮಿತವೇ ಎಂದು ಪ್ರಶ್ನಿಸಿದರು.

Tags:
error: Content is protected !!