ಹೊಸದಿಲ್ಲಿ : ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣದ ಬಗ್ಗೆ ಚರ್ಚಿಸಿ, ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಕರಣದ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದ ಮ್ಯಾಜಿಸ್ಟ್ರಿಯಲ್ ತನಿಖೆ, ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ಆಯೋಗ ರಚನೆ ಮೈಕೆಲ್ ಕುನಾ, ಐದು ಪೊಲೀಸ್ ಅಧಿಕಾರಿಗಳ ಅಮಾನತ್ತು, ಗುಪ್ತಚರ ಇಲಾಖೆಯ ಮುಖ್ಯಸ್ಥರ ಬದಲಾವಣೆ, ರಾಜಕೀಯ ಕಾರ್ಯದರ್ಶಿಗಳ ಬದಲಾವಣೆಯಂತಹ ಸರ್ಕಾರದ ಕ್ರಮಗಳು ಸಮರ್ಪಕವಾಗಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಏಕಸದಸ್ಯ ಆಯೋಗದ ತನಿಖಾ ವರದಿಯನ್ನು ಆಧರಿಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಚಿವ ಸಂಪುಟ ಪುನರ್ರಚನೆಯ ಬಗ್ಗೆ ಚರ್ಚೆಯಾಗಿಲ್ಲ: ಇದೇ ತಿಂಗಳ 13 ರಂದು 16 ನೇ ಹಣಕಾಸಿನ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಲು ನವದೆಹಲಿಗೆ ಆಗಮಿಸಲಿದ್ದೇನೆ. ಸಚಿವ ಸಂಪುಟ ಪುನರ್ರಚನೆಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದರು.
ಕುಂಭಮೇಳದ ಕಾಲ್ತುಳಿತ ಘಟನೆ- ಅಲ್ಲಿನ ಸಿಎಂ ಜವಾಬ್ದಾರರಲ್ಲವೇ?: ಕೇಂದ್ರದ ಸಂಸತ್ತಿನಲ್ಲಿ ಬೆಂಗಳೂರಿನ ಕಾಲ್ತುಳಿತದ ಘಟನೆ ಚರ್ಚೆಗೆ ಬರುವ ಸಾಧ್ಯತೆಯಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರ ಮೊದಲು ಕುಂಭಮೇಳದಲ್ಲಿ ನಡೆದ ಕಾಲ್ತುಳಿತ, ಪ್ರಧಾನಿಯವರು ಉದ್ಘಾಟಿಸಿದ ಸೇತುವೆ ಕುಸಿದು ಜನ ಮೃತಪಟ್ಟ ಘಟನೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಲಿ. ಬೆಂಗಳೂರಿನಲ್ಲಿ ನಡೆದ ಘಟನೆ ಸರ್ಕಾರಕ್ಕೆ ದು:ಖದ ಸಂಗತಿಯಾಗಿದೆ. ಯುವಜನರ ಸಾವು ಎಲ್ಲರಿಗೂ ನೋವು ತರುವ ವಿಚಾರ. ಕುಂಭಮೇಳದ ಘಟನೆಯಲ್ಲಿ ಜನರ ಸಾವು ಪ್ರಕರಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಜವಾಬ್ದಾರಿಯಲ್ಲವೇ ಎಂದು ಪ್ರಶ್ನಿಸಿದರು.
ಇಡಿ ತನಿಖಾ ಸಂಸ್ಥೆ 100ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾನೂನು ಕ್ರಮ ತೆಗೆದುಕೊಂಡಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದರು.