ಕೊಪ್ಪಳ : ಪಿಎಸ್‍ಐ ನೇಮಕಾತಿಯಲ್ಲಿ ಹಗರಣಗಳು ನಡೆದು ವರ್ಷಗಳಾಗಿವೆ. ಅಲ್ಲಿಂದ ಈವರೆಗೂ ಒಂದು ಪಿಎಸ್‍ಐ ಹುದ್ದೆಗೂ ನೇಮಕಾತಿ ಮಾಡಲು ಸಾಧ್ಯವಿಲ್ಲ. ಶೀಘ್ರದಲ್ಲಿಯೇ ಇನ್‌ಸ್ಪೆಕ್ಟರ್ ಹಾಗೂ ಕಾನ್‌ಸ್ಟೇಬಲ್‌ಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಾವಿರ ಹುದ್ದೆಗಳ ಖಾಲಿ ಇವೆ. ಕಳೆದ 2 ತಿಂಗಳ ಹಿಂದೆ 500 ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ. ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಶೀಘ್ರವೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದರು.
ಇದನ್ನೂ ಓದಿ: 500 ಆಫೀಸ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಹಗರಣಕ್ಕೆ ಸಿಲುಕಿದ್ದ 470ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸಿಂಧುತ್ವ ಪ್ರಮಾಣ ಪತ್ರ ಪಡೆದು ಇನ್ನು 15 ದಿನಗಳ ಒಳಗಾಗಿ ನೇಮಕಾತಿ ಆದೇಶ ನೀಡಲಾಗುವುದು ಎಂದು ತಿಳಿಸಿದರು.
ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಯಾವುದೇ ಪ್ರಕರಣದಲ್ಲೂ ಪೊಲೀಸರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಅವಕಾಶ ಮಾಡಿದ್ದೇವೆ. ಯಾರ ಮೇಲೂ ಒತ್ತಡ ಹೇರುವುದಿಲ್ಲ. ಅಪರಾಧಗಳನ್ನು ನಿಯಂತ್ರಿಸಿ ಶಾಂತಿ ಸುವ್ಯವಸ್ಥೆ ಪಾಲನೆ ನಮ್ಮ ಮೊದಲ ಆದ್ಯತೆ ಎಂದರು.