ಶಿವಮೊಗ್ಗ: ನಗರದ ರಾಗಿಗುಡ್ಡದಲ್ಲಿನ ನಾಗರ ಕಟ್ಟೆಯ ಮೇಲಿದ್ದ ಗಣಪತಿ ಹಾಗೂ ಶೇಷನಾಗ ವಿಗ್ರಹಗಳನ್ನು ವಿರೂಪಗೊಳಿಸಿ ಕಾಲಿನಿಂದ ಒದ್ದು ಚರಂಡಿಗೆ ಎಸೆದು ದುಷ್ಟತನ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಡಾವಣೆಯ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ ವಿಗ್ರಹಕ್ಕೆ ಒದ್ದು, ನಾಗರ ಕಲ್ಲನ್ನು ಚರಂಡಿಗೆ ಎಸೆದಿರುವ ಆರೋಪ ಕೇಳಿಬಂದಿತ್ತು. ಅನ್ಯಕೋಮಿನ ಯುವಕರಿಂದ ದುಷ್ಕೃತ್ಯ ನಡೆದಿದೆ ಎನ್ನಲಾಗಿದ್ದು, ಹಿಂದೂ ಮುಖಂಡರು ಇದರಿಂದ ಕೆರಳಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮುನ್ನಚ್ಚರಿಕಾ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಘಟನಾ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ.
ಈ ಘಟನೆಯಿಂದ ಕೆರಳಿದ ಸ್ಥಳೀಯ ಮಹಿಳೆಯರು ತಕ್ಷಣ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ, ಯುವಕರು ವಿಗ್ರಹಗಳನ್ನು ಪುನಃ ಕಟ್ಟೆಯ ಮೇಲೆ ಇರಿಸಿ ತೆರಳಿದ್ದಾರೆ.
ಘಟನೆ ಹಿನ್ನೆಲೆ: ಶಿವಮೊಗ್ಗ ಹೊರವಲಯ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯಲ್ಲಿ ಶನಿವಾರ ಸಂಜೆ ಸ್ಥಳೀಯರು ಪಾರ್ಕ್‌ನಂತಹ ಜಾಗದಲ್ಲಿ ಗಣಪತಿ ಹಾಗೂ ನಾಗ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರು. ಈ ವೇಳೆ ವ್ಯಕ್ತಿಯೋರ್ವ ಬಂದು ಏಕಾಏಕಿ ಎರಡು ವಿಗ್ರಹಗಳನ್ನು ಕಟ್ಟೆಯಿಂದ ಕೆಳಗೆ ಹಾಕಿ ಕಾಲಿನಿಂದ ಒದ್ದು ವಿಗ್ರಹಗಳನ್ನು ವಿರೂಪಗೊಳಿಸಲು ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಗ್ರಹಗಳನ್ನು ನೆಲಕ್ಕೆ ಹಾಕಿ ವಿರೂಪಗೊಳಿಸಿ, ಪರಾರಿಯಾಗುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.