ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಗೆ ಬರುವ ಬಗರ್‌ಹುಕುಂ ಭೂಮಿಯನ್ನು ಕೆಲ ಪ್ರಭಾವ ವ್ಯಕ್ತಿಗಳು ಮತ್ತು ರಾಜಕಾರಣಿಗಳು ಅಕ್ರಮವಾಗಿ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಆರೋಪಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾಡಳಿತದಿಂದ ಯಶವಂತಪುರ ವಿಧಾನಸಭಾ ಕ್ಷೇತ್ರದ ಚಿಕ್ಕನಹಳ್ಳಿ ಗ್ರಾಮದಲ್ಲಿ ಇಂದು(ಫೆಬ್ರವರಿ.16) ಆಯೋಜಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಶವಂತಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 1,600 ಎಕರೆ ಸರ್ಕಾರಿ ಭೂಮಿಯನ್ನು ಅನೇಕ ವರ್ಷಗಳಿಂದ ಸಾವಿರಾರು ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಅವರು ಅದಕ್ಕೆ ಸಂಬಂಧಿಸಿದ ಸಾಗುವಳಿ ಚೀಟಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಆದರೆ, ಬಗರ್‌ಹುಕುಂ ಭೂಮಿಯು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇದೆ. ಹಾಗೆಯೇ, ಕೆಲ ಪ್ರಭಾವಿಗಳು, ರಾಜಕಾರಣಿಗಳು ಅಕ್ರಮವಾಗಿ ಬಗರ್‌ಹುಕುಂ ಹೆಸರಿನಲ್ಲಿ ಸರ್ಕಾರಿ ಭೂಮಿ ಕಬಳಿಸಿದ್ದಾರೆ. ಹೀಗಾಗಿ ರೈತರಿಗೆ ಸಾಗುವಳಿ ಚೀಟಿ ನೀಡುವಲ್ಲಿ ತೊಡಕಾಗುತ್ತಿದೆ ಎಂದು ಹೇಳಿದರು.
ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ನೈಜ ರೈತರಿಗೆ ಸಾಗುವಳಿ ಚೀಟಿ ನೀಡುವ ವಿಚಾರವಾಗಿ ಸಂಬಂಧಪಟ್ಟ ಕಾಯ್ದೆಗೆ ಕೆಲವು ತಿದ್ದುಪಡಿ ಮಾಡುವಂತೆ ಸಭೆ ನಡೆಸಲಾಗಿದೆ. ಅಲ್ಲದೇ ಸಚಿವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಈ ಬಗ್ಗೆ ಭರವಸೆ ನೀಡಿದ್ದಾರೆ. ಇನ್ನು ಸರ್ಕಾರವು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಬಗರ್‌ಹುಕುಂ ಭೂಮಿಗೆ ಸಾಗುವಳಿ ಚೀಟಿ ನೀಡುವ ಮತ್ತು ಸಕ್ರಮಗೊಳಿಸುವ ವಿಶ್ವಾಸವಿದೆ. ಹಾಗಾಗಿ ಅಲ್ಲಿಯವರೆಗೂ ಬಗರ್‌ಹುಕುಂ ಭೂಮಿಯ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ತಿಳಿಸಿದರು.