ಬೆಂಗಳೂರು: ಅರ್‌ಎಸ್‌ಎಸ್‌ಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಅವರು ‘ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆಯಬೇಕು’ ಎಂಬ ಹೇಳಿಕೆಗೆ ಕಿಡಿಕಾರಿದರು.
ಆರ್.ಎಸ್.ಎಸ್ ಅವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡಿರುವವರು. ಸಂವಿಧಾನ ಬದಲಾವಣೆಯಾಗಬೇಕು ಹಾಗೂ ಮನುಸ್ಮೃತಿ ಜಾರಿಯಾಗಬೇಕೆಂಬ ಮನಸ್ಥಿತಿ ಇರುವವರು. ಅದನ್ನು ಬಿಟ್ಟು ಅವರಿಗೆ ಇನ್ನೇನು ಹೇಳಲು ಸಾಧ್ಯ. ಸಂವಿಧಾನ ಶಾಸನ ಸಭೆಯಲ್ಲಿ ಚರ್ಚೆಯಾಗಿ ರಚನೆಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇದರ ಅಧ್ಯಕ್ಷರಾಗಿ ಸಂವಿಧಾನ ರಚಿಸಿದ್ದಾರೆ ಎಂದರು.
ಇನ್ನು ಜಾತ್ಯಾತೀತ ಮತ್ತು ಸಮಾಜವಾದ ಎಂಬ ಪದಗಳನ್ನು ನಂತರ ಸೇರಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಂಸತ್ತಿನಲ್ಲಿ ಇದು ಚರ್ಚೆಯಾಗಿ ಸಂವಿಧಾನ ತಿದ್ದುಪಡಿ ಮಾಡಲಾಗಿದೆ. ದತ್ತಾತ್ರೇಯ ಹೊಸಬಾಳೆ ಅವರು ಹೇಳಿದಂತೆ ಸಂವಿಧಾನ ರಚನೆಯಾಗಿಲ್ಲ ಎಂದರು.





