ವಿಜಯಪುರ : ನೆರೆಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಂಗಳವಾರ ಸಂಜೆ ೭ ಗಂಟೆಗೆ ಏಳೆಂಟು ಮುಸುಕುದಾರಿ ದರೋಡೆಕೋರರು ಪಿಸ್ತೂಲ್ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ.
ಅಂದಾಜು ರೂ. ೮ ಕೋಟಿ ನಗದು, ೫೦ ಕೆ.ಜಿ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಬ್ಯಾಂಕಿನ ಸಿಬ್ಬಂದಿ, ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಆದರೆ, ಖಚಿತ ಮಾಹಿತಿ ಇನ್ನೂ ಲಭಿಸಿಲ್ಲ. ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಜನ ನಿಬಿಡ ಪ್ರದೇಶದಲ್ಲಿರುವ ಎಸ್‌ಬಿಐ ಶಾಖೆಯ ಸಿಬ್ಬಂದಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಅಣಿಯಾಗುತ್ತಿದ್ದ ವೇಳೆ ಮಿಲಿಟರಿ ಬಣ್ಣದ ಬಟ್ಟೆ ಧರಿಸಿದ್ದ ದರೋಡೆಕೋರರು ಬ್ಯಾಂಕಿನ ಮುಖ್ಯ ದ್ವಾರದ ಮೂಲಕ ಪ್ರವೇಶಿಸಿದ್ದಾರೆ. ನಾಡ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕ್ ವ್ಯವಸ್ಥಾಪಕ ಮತ್ತು ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿ, ದರೋಡೆ ಮಾಡಿದ್ದಾರೆ. ದರೋಡೆಕೋರರು ಘಟನೆ ಬಳಿಕ ಕದ್ದ ಚಿನ್ನಾಭರಣವನ್ನು ವಾಹನಗಳಲ್ಲಿ ಹೇರಿಕೊಂಡು ಮಹಾರಾಷ್ಟ್ರದತ್ತ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಅಽಕಾರಿಗಳು ಭೇಟಿ ನೀಡಿದ್ದು, ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.





