Mysore
15
broken clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ನೇಮಕಾತಿ ವಿಳಂಬ | ಪ್ರತಿಧ್ವನಿಸಿದ ಪ್ರತಿಭಟನೆಗಳು

ಬೆಳಗಾವಿ : ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದವು.

ಪ್ರತಿಪಕ್ಷದ ನಾಯಕ ಆರ್.ಅಶೋಕ್ ನಿಲುವಳಿ ಸೂಚನೆಯಡಿ, ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯ ಕುರಿತು ಚರ್ಚೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಧಾರವಾಡ, ವಿಜಯಪುರ ಸೇರಿದಂತೆ ಹಲವಾರು ಕಡೆಗಳಲ್ಲಿ ಉದ್ಯೋಗಾಕಾಂಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆಯಲ್ಲೂ ಸುವರ್ಣಸೌಧದ ಮುಂದೆ ಪ್ರತಿಭಟಿಸಲು ಅನುಮತಿ ಕೇಳಲಾಗಿತ್ತು. ೩೦ ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಸೇರುವ ಸಾಧ್ಯತೆ ಇರುವುದರಿಂದ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇತ್ತ ಪ್ರತಿಭಟನೆಗಳಿಗೂ ಅನುಮತಿ ಕೊಡುತ್ತಿಲ್ಲ, ಸರ್ಕಾರಿ ಹುದ್ದೆಗಳ ನೇಮಕಾತಿಯೂ ಆಗುತ್ತಿಲ್ಲ. ಸದನದಲ್ಲಿ ಚರ್ಚಿಸಲಾದರೂ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ:ಶೀಘ್ರ 3600 ಸಿಬ್ಬಂದಿ ನೇಮಕಾತಿಗೆ ಅಧಿಸೂಚನೆ : ಪರಮೇಶ್ವರ್‌

ಒಳ ಮೀಸಲಾತಿಯ ಗೊಂದಲವನ್ನು ಮುಂದಿಟ್ಟುಕೊಂಡು ಎರಡೂವರೆ ವರ್ಷಗಳಿಂದಲೂ ಸರ್ಕಾರ ಯಾವ ಹುದ್ದೆಗಳಿಗೂ ನೇಮಕಾತಿ ಮಾಡಿಲ್ಲ ಎಂದು ಆಕ್ಷೇಪಿಸಿದರು. ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವ ಕೃಷ್ಣಭೈರೇಗೌಡ, ಒಳಮೀಸಲಾತಿಯ ಗೊಂದಲಗಳನ್ನು ಬಗೆಹರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ಗೊಂದಲದಿಂದಾಗಿಯೇ ನೇಮಕಾತಿ ವಿಳಂಬವಾಗಿದೆ. ಒಳ ಮೀಸಲಾತಿ ಕುರಿತ ಮಸೂದೆಯನ್ನು ಇದೇ ಅಧಿವೇಶನದಲ್ಲಿ ಮಂಡಿಸಲಾಗಿದೆ. ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲೂ ವಿಷಯ ಕುರಿತು ಚರ್ಚಿಸಲಾಗುತ್ತಿದೆ ಎಂದು ಹೇಳಿದರು.

ವಿಧಾನಸಭೆಯ ನಿಯಮಾವಳಿಗಳ ಪ್ರಕಾರ ನಿಲುವಳಿ ಸೂಚನೆಯಡಿ ಈ ವಿಚಾರವನ್ನು ಚರ್ಚಿಸಲು ಅವಕಾಶ ಇಲ್ಲ ಎಂದು ಸಭಾಧ್ಯಕ್ಷರು ನಿಲುವಳಿ ಸೂಚನೆಯನ್ನು ತಳ್ಳಿ ಹಾಕಿದರು.

Tags:
error: Content is protected !!