ಬೆಂಗಳೂರು: ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಪ್ರಕ್ರಿಯೆ ಇಂದು ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೋಲಾರದ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆಯಿತು.
ಕಳೆದ 2023ರ ಮಾಲೂರು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನ ಅನುಸಾರ ಇಂದು ಮರು ಮತ ಎಣಿಕೆ ಬೆಳಗ್ಗೆ 8 ಗಂಟೆಯಿಂದ ಆರಂಭವಾಯಿತು.
ಎಣಿಕ ಕೇಂದ್ರದೊಳಗೆ ಪ್ರವೇಶಿಸುವ ಪ್ರತಿಯೊಬ್ಬರನ್ನು ಚುನಾವಣಾ ಸಿಬ್ಬಂದಿ, ಏಜೆಂಟರು ಮತ್ತು ಅಧಿಕಾರಿಗಳನ್ನು ಪೊಲೀಸರು ಸಂಪೂರ್ಣವಾಗಿ ತಪಾಸಣೆ ನಡೆಸಿ ಒಳಗೆ ಬಿಡಲಾಯಿತು. ಮತ ಎಣಿಕೆ ಕೇಂದ್ರದ ಸುತ್ತ ಸಿಸಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿತ್ತು.
ಇದನ್ನು ಓದಿ: ಮಾಲೂರು ಕ್ಷೇತ್ರದ ಮರು ಮತ ಎಣಿಕೆ: ಕೇಂದ್ರದ ಸುತ್ತ ನಿಷೇಧಾಜ್ಞೆ
ಮೊಬೈಲ್ ಫೋನ್, ಕಾಗದ, ಪೆನ್ ಸೇರಿದಂತೆ ಯಾವುದೇ ವಸ್ತುಗಳನ್ನು ಒಳಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಲಿಲ್ಲ.
ಪರಿಶೀಲನೆಯ ನಂತರ ಮಾತ್ರ ಅವರಿಗೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ನೀಡಲಾಯಿತು. ಎಣಿಕ ಕೇಂದ್ರದ ಆವರಣದೊಳಗೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿತ್ತು.
2023 ಮೇ.13ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಕೇವಲ 248 ಮತಗಳಿಂದ ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ಕೆ.ಎಸ್ ಮಂಜುನಾಥಗೌಡ ಮತ ಎಣಿಕೆಯಲ್ಲಿ ಲೋಪ ನಡೆದಿದೆ ಎಂದು ಮರು ಎಣಿಕೆಗೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಅರ್ಜಿ ಪರಿಗಣಿಸಿ ಮರು ಮತ ಎಣಿಕೆಗೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಮತ ಎಣಿಕೆ ನಡೆಸಿ ಫಲಿತಾಂಶ ಘೋಷಿಸದೆ ಸೀಲ್ ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.





