ತುಮಕೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾದ ಬೆನ್ನಲ್ಲೇ ಈಗ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಯೊಂದು ಭಾರೀ ಸಂಚಲನ ಮೂಡಿಸಿದೆ.
ತುಮಕೂರಿನಲ್ಲಿಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು, ನೀವೆಲ್ಲ ಸೇರಿ ದೊಡ್ಡ ಮನಸ್ಸು ಮಾಡಿ ನನ್ನ ರಾಜೀನಾಮೆ ಕೇಳಿದ್ರೆ ಕೊಡೋಕೆ ರೆಡಿ ಇದ್ದೀನಿ ಎಂದು ಹೇಳುವ ಮೂಲಕ ಕಾರ್ಯಕರ್ತರಿಗೆ ಬಿಗ್ ಶಾಕ್ ನೀಡಿದ್ದಾರೆ.
ಇತ್ತೀಚೆಗೆ ಕ್ಷೇತ್ರದ ಕಾರ್ಯಕರ್ತರ ಜೊತೆ ಬೆರೆಯಲು ಸಾಧ್ಯವಾಗುತ್ತಿಲ್ಲ. ನಿಮ್ಮ ಮನಸ್ಸಿನ ಆಕಾಂಕ್ಷೆಯಂತೆ ಸ್ಪಂದಿಸಲು ಆಗುತ್ತಿಲ್ಲ. ಇದಕ್ಕಾಗಿ ಕ್ಷಮೆ ಕೇಳುತ್ತೇನೆ. ನೀವು ಹೇಳಿದರೆ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆಯಿಂದ ಕಾರ್ಯಕರ್ತರು ಹಾಗೂ ಮುಖಂಡರು ವಿಚಲಿತರಾದ ಘಟನೆ ನಡೆಯಿತು.
ಈ ವೇಳೆ ಮಾತನಾಡಿದ ಕಾರ್ಯಕರ್ತರು ದಯವಿಟ್ಟು ತಕ್ಷಣ ರಾಜೀನಾಮೆ ಕೊಡಬೇಡಿ ಎಂದು ಕೂಗಿ ಪರಮೇಶ್ವರ್ ಅವರನ್ನು ತಡೆದರು.
ಸಿಎಂ ಹಾಗೂ ಕೆಪಿಸಿಸಿ ಬದಲಾವಣೆ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಗೃಹ ಸಚಿವರ ಈ ಹೇಳಿಕೆ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಬಂದು ತಲುಪುತ್ತದೆ ಎಂಬುದನ್ನು ಕಾದುನೋಡಬೇಕಿದೆ.