ಪ್ರಶಾಂತ್ ಎಸ್.
ಮೈಸೂರು: ಯಾವುದೋ ಕಾರಣಕ್ಕೆ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವ ಬಹುತೇಕ ಮಂದಿ ಮನೆ ಹಾಗೂ ಕುಟುಂಬದವರಿಂದ ದೂರವಾಗುವುದು ಸಹಜ. ಬೀದಿ ಬೀದಿ ಅಲೆಯುತ್ತಾ, ಸಿಕ್ಕಿದ್ದನ್ನು ತಿನ್ನುತ್ತಾ ಕಾಲ ಕಳೆಯುವ ಇಂತಹವರಿಗೆ ನಿಜವಾಗಿಯೂ ಮಾನವೀಯ ಮನಸ್ಸುಗಳ ಸಾಂತ್ವನ, ಒಂದಿಷ್ಟು ಚಿಕಿತ್ಸೆ ಹಾಗೂ ಆಶ್ರಯ ಬೇಕಾಗಿರುತ್ತದೆ.
ಮಾನಸಿಕ ಅಸ್ವಸ್ಥರು ಸಾಮಾನ್ಯವಾಗಿ ಹೆದ್ದಾರಿಗಳ ಪಕ್ಕದಲ್ಲಿರುವ ಮರಗಳನ್ನೇ ಆಶ್ರಯ ತಾಣವನ್ನಾಗಿಸಿ ಕೊಂಡಿರುತ್ತಾರೆ. ಮಳೆ, ಗಾಳಿ, ಚಳಿ ಎನ್ನದೇ ನಡುಗುತ್ತ, ಅಸಹಾಯಕತೆಯಿಂದ ಇರುತ್ತಾರೆ. ಅವರಿಗೆ ಕುಡಿಯಲು ನೀರು ಕೂಡ ಸರಿಯಾಗಿ ದೊರಕದೇ, ಹಸಿವನ್ನು ಹೇಳಿಕೊಳ್ಳಲೂ ಆಗದೇ ಇರುವಂತಹ ಅರೆಪ್ರಜ್ಞಾ ಸ್ಥಿತಿಯಲ್ಲಿದ್ದು ಪುಟ್ಟ ಮಕ್ಕಳಂತೆ ಕಣ್ಣೀರು ಹಾಕುವುದನ್ನು ನೋಡುತ್ತಿದ್ದರೆ ಎಂತಹವರ ಕರುಳೂ ಚುರುಕ್ ಎನ್ನದಿರದು. ಕೊಳೆಯಾಗಿರುವ ಬಟ್ಟೆ, ದೇಹದ ಕೆಲವೆಡೆ ಗಾಯಗಳಾಗಿದ್ದರೂ ಅದರ ಅರಿವಿಲ್ಲದೇ ಯಾರಾದರೂ ಪ್ರವಾಸಿಗರು, ದಾರಿಹೋಕರು ತಿನ್ನುವುದಕ್ಕೆ ಏನಾದರೂ ಕೊಟ್ಟರೆ, ಸ್ವೀಕರಿಸಿ ಕೃತಜ್ಞತೆ ಎಂಬಂತೆ ಮುಗುಳ್ನಗೆ ಬೀರಿ ಜಾಗ ಖಾಲಿ ಮಾಡುತ್ತಾರೆ.
ಮೈಸೂರು-ಮಾನಂದವಾಡಿ, ಮಡಿಕೇರಿ, ಬೆಂಗಳೂರು ಹೆದ್ದಾರಿ ಬದಿಗಳಲ್ಲಿ ಹಲವು ಕಡೆ ಇಂತಹವರು ಕಂಡುಬರುತ್ತಾರೆ. ಹುಣಸೂರು, ಸರಗೂರು ಸೇರಿದಂತೆ ಹಲವು ನಗರ ಪ್ರದೇಶಗಳಲ್ಲೂ ಹೀಗೆ ನೆಲೆ ಇಲ್ಲದೇ ಅಲೆಯುತ್ತಿರುವವರನ್ನು ಸಾರ್ವಜನಿಕರು ಗಮನಿಸಿ ದೂರು ನೀಡಿದ್ದಾರೆ. ಇಂತಹ ಮಾನಸಿಕ ಅಸ್ವಸ್ಥರು ರಾತ್ರಿ ವೇಳೆ ಕಾಣಿಸಿಕೊಳ್ಳುತ್ತಿದ್ದು ಇವರು ಯಾರು? ಎಲ್ಲಿಂದ ಬಂದವರು? ಎಂಬುದರ ಬಗ್ಗೆ ಖಚಿತ ಮಾಹಿತಿ ಸಿಗುವುದು ದುಸ್ತರ.
೨೦೨೪-೨೫ನೇ ಸಾಲಿನಲ್ಲಿ ೩೦,೧೫೭, ೨೦೨೫-೨೦೨೬ನೇ ಸಾಲಿನಲ್ಲಿ ೧೧,೫೬೬ ಮನೋರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ೧,೦೩೧ ಮಂದಿಗೆ ಆಪ್ತ ಸಮಾಲೋಚನೆ ಮೂಲಕ ಚಿಕಿತ್ಸೆ ನೀಡಲಾಗಿದೆ ಎಂಬುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಹೇಳುತ್ತಾರೆ. ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ, ಆಶ್ರಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆ ಕ್ರಮವಹಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಮಾನಸಿಕ ಬಲ ತುಂಬುವ ‘ಮನೋಚೈತನ್ಯ’ ಕ್ಲಿನಿಕ್:
೨೦೨೫ನೇ ಸಾಲಿನಲ್ಲಿ ಮಾನಸಿಕ ಅಸ್ವಸ್ಥರ ಚಿಕಿತ್ಸೆಗಾಗಿ ಆರೋಗ್ಯ ಇಲಾಖೆಯು ‘ಮನೋಚೈತನ್ಯ’ ಕ್ಲಿನಿಕ್ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆ ಅಡಿಯಲ್ಲಿ ಮಾನಸಿಕ ಅಸ್ವಸ್ಥರಿಗೆ ಕೌನ್ಸಿಲಿಂಗ್ ಹಾಗೂ ಚಿಕಿತ್ಸೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ತರಬೇತಿ ನೀಡಿದ್ದು, ಆಶಾ ಕಾರ್ಯಕರ್ತೆಯರಿಗೂ ಈ ಸಂಬಂಧ ತರಬೇತಿ ನೀಡಲಾಗಿದೆ. ಈ ‘ಮನೋಚೈತನ್ಯ ’ ಕ್ಲಿನಿಕ್‌ಗೆ ಪ್ರತಿ ಮಂಗಳವಾರ ತಜ್ಞ ವೈದ್ಯರ ತಂಡ ಭೇಟಿ ನೀಡಿ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ನೀಡುತ್ತದೆ.
” ಮಾನಸಿಕ ಅಸ್ವಸ್ಥರನ್ನು ನಿರಾಶ್ರಿತರೆಂದು ಪರಿಗಣಿಸುತ್ತೇವೆ. ಇಂತಹ ವ್ಯಕ್ತಿಗಳನ್ನು ೨೦೧೭ರ ಕಾಯಿದೆ ಪ್ರಕಾರ ಆಸ್ಪತ್ರೆಗೆ ಪೊಲೀಸರು ಸೇರಿಸುತ್ತಾರೆ. ಆಯಾ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುತ್ತಾರೆ. ನಂತರ ಮಾನಸಿಕ ಅಸ್ವಸ್ಥರನ್ನು ಹೆಚ್ಚಿನ ಚಿಕಿತ್ಸೆಗಾಗಿ ‘ಮನೋಚೈತನ್ಯ’ ಕ್ಲಿನಿಕ್‌ಗೆ ಕಳುಹಿಸಲಾಗುತ್ತದೆ. ಇಲಾಖೆಯ ಸಹಾಯವಾಣಿ ಸಂಖ್ಯೆ ೧೪೪೧೬ ಸಂಪರ್ಕಿಸಬಹುದು.”
ಡಾ.ಪಿ.ಸಿ.ಕುಮಾರಸ್ವಾಮಿ, ಡಿಎಚ್‌ಒ
” ಮಾನಸಿಕ ಅಸ್ವಸ್ಥರ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸ್ ಇಲಾಖೆಯ ಟೋಲ್ ಫ್ರೀ ಸಂಖ್ಯೆ ೧೧೨ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ಇಲಾಖೆಯ ಸಿಬ್ಬಂದಿ ಸಹಕಾರದೊಂದಿಗೆ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಾರೆ. ಅಗತ್ಯವಾದರೆ ಮಾನಸಿಕ ಆಸ್ಪತ್ರೆಗೆ ಸೇರಿಸಲಾಗುತ್ತದೆ.”
ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ




