Mysore
26
overcast clouds

Social Media

ಶನಿವಾರ, 23 ಮೇ 2026
Light
Dark

ಗಾಂಧಿ ಅಭಿಯಾನ ಅರಿವಿನ ಯಾನ

ಸುಧಾರಣೆ ನೆಪದಲ್ಲಿ ಎಚ್ಚರ ತಪ್ಪಿದೆ. 

ಪ್ರೌಢಶಾಲೆಯಲ್ಲಿ ನನಗೆ ಆಪ್ತ ಸ್ನೇಹಿತರು ಬಹಳ ಕಡಿಮೆಯಿದ್ದರು. ಅಲ್ಲಿ ಬೇರೆ ಬೇರೆ ಕಾಲದಲ್ಲಿ ನನಗೆ ಅತ್ಯಂತ ಆಪ್ತರಾದ ಸ್ನೇಹಿತರು ಇಬ್ಬರು ಮಾತ್ರ ಇದ್ದರು. ಒಬ್ಬನ ಮಿತ್ರತ್ವ ಬಹಳ ದಿನಗಳು ಉಳಿಯಲಿಲ್ಲ. ಅವನ ಸ್ನೇಹವನ್ನು ನಾನಾಗಿ ಬಿಡಲಿಲ್ಲ. ಆದರೆ ನಾನು ಇನ್ನೊಬ್ಬನ ಸ್ನೇಹವನ್ನು ಬೆಳೆಸಿದುದಕ್ಕಾಗಿ ಆತ ನನ್ನ ಸಂಗವನ್ನು ತ್ಯಜಿಸಿದನು. ಈ ಎರಡನೆಯವನ ಮಿತ್ರತ್ವ ನನ್ನ ಜೀವನದಲ್ಲಿ ಒಂದು ದುಃಖಕರ ಪ್ರಕರಣ. ಈ ಸ್ನೇಹ ಬಹುದಿನಗಳವರೆಗೆ ಇದ್ದಿತು. ಒಬ್ಬ ಸುಧಾರಕನ ದೃಷ್ಟಿಯಿಂದ ನಾನು ಆ ಗೆಳೆತನವನ್ನು ಮಾಡಿದೆನು. ಆ ವ್ಯಕ್ತಿ ಮೊದಲು ನನ್ನ ಅಣ್ಣನ ಸ್ನೇಹಿತನಾಗಿದ್ದನು. ಇಬ್ಬರದೂ ಒಂದೇ ತರಗತಿ. ಅವನಲ್ಲಿದ್ದ ದೋಷಗಳೆಲ್ಲ ನನಗೆ ಗೊತ್ತಿದ್ದವು. ಆದರೆ ಅವನು ವಿಶ್ವಾಸಪಾತ್ರ ಗೆಳೆಯನೆಂದು ನಾನು ತಿಳಿದಿದ್ದೆ. ನನ್ನ ತಾಯಿ, ದೊಡ್ಡಣ್ಣ, ಹೆಂಡತಿ, ಮೂವರೂ ಇದು ಕೆಟ್ಟ ಸಹವಾಸವೆಂದು ನನ್ನನ್ನು ಎಚ್ಚರಿಸಿದ್ದರು. ಹೆಂಡತಿಯು ಕೊಟ್ಟ ಎಚ್ಚರಿಕೆಯನ್ನು ಲಕ್ಷ ಮಾಡಲು ನಾನು ಬಹಳ ಅಹಂಭಾವದಿಂದ ಕೂಡಿದ್ದೆ. ಆದರೆ ತಾಯಿಯ ಮತ್ತು ದೊಡ್ಡಣ್ಣನ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೋಗುವ ಧೈರ್ಯ ನನಗಿರಲಿಲ್ಲ.

ಹಾಗಾಗಿ ‘ನೀವು ಹೇಳುವ ದೋಷಗಳು ಅವನಲ್ಲಿರುವುದು ನನಗೆ ಗೊತ್ತು. ಆದರೆ ಅವನ ಗುಣಗಳನ್ನು ನೀವು ಅರಿಯಿರಿ. ನನ್ನನ್ನು ಅವನು ಕೆಟ್ಟ ಮಾರ್ಗಕ್ಕೆ ಎಳೆಯಲಾರ. ಏಕೆಂದರೆ ನಾನು ಅವನ ಸಹವಾಸ ಮಾಡಿರುವುದು ಅವನನ್ನು ಒಳ್ಳೆಯ ಮಾರ್ಗಕ್ಕೆ ತರುವುದಕ್ಕಾಗಿಯೇ, ಅವನು ಸುಧಾರಣೆ ಹೊಂದಿದರೆ ಅತ್ಯಂತ ಒಳ್ಳೆಯ ಮನುಷ್ಯನಾಗುವ ನೆಂಬುದು ನನ್ನ ನಂಬಿಕೆ’ ಎಂದು ಅವರನ್ನು ಸಮಾಧಾನಪಡಿಸಿದೆನು.

ನಾನು ಆಗ ತಿಳಿದುಕೊಂಡಿದ್ದು ತಪ್ಪು ಎಂಬುದು ನಂತರ ಅನುಭವವಾಯಿತು. ಸುಧಾರಕ, ತಾನು ಯಾರನ್ನು ಸುಧಾರಣೆ ಮಾಡಬೇಕೆಂದು ಬಯಸುತ್ತಾನೆಯೋ ಅವನೊಂದಿಗೆ ಪೂರ್ಣ ಸಲಿಗೆಯಿಂದ ಇರಲಾಗುವುದಿಲ್ಲ. ಗೆಳೆತನದಲ್ಲಿ ಸುಧಾರಣೆ ಸಾಧ್ಯವಿಲ್ಲ. ನಿಜವಾದ ಮಿತ್ರತ್ವದಲ್ಲಿ ಅನನ್ಯ ಭಾವನೆ ಇರುತ್ತದೆ. ಒಬ್ಬ ಮಿತ್ರನ ಪ್ರಭಾವ ಮತ್ತೊಬ್ಬನ ಮೇಲೆ ಬೀಳದಿರುವುದಿಲ್ಲ. ಇದರಿಂದ ಮಿತ್ರರಲ್ಲಿ ಒಬ್ಬನಿಂದ ಮತ್ತೊಬ್ಬನ ಸುಧಾರಣೆಯಾಗುವ ಅವಕಾಶ ಕಡಿಮೆ. ಈ ಮಹಾಶಯನೊಂದಿಗೆ ನನ್ನ ಸಂಪರ್ಕವುಂಟಾದ ಕಾಲದಲ್ಲಿ ರಾಜಕೋಟೆಯಲ್ಲಿ ಸುಧಾರಕ ಪಂಥವೊಂದು ಪ್ರಬಲವಾಗಿತ್ತು. ಈ ಸ್ನೇಹಿತ, ಹಿಂದೂ ಉಪಾಧ್ಯಾಯರಲ್ಲಿ ಬಹು ಮಂದಿ ಗುಟ್ಟಾಗಿ ಮದ್ಯ ಸೇವನೆ ಮಾಡುತ್ತಾರೆಂದು ನನಗೆ ಹೇಳಿದ.

ರಾಜಕೋಟೆಯಲ್ಲಿ ಹಾಗೆ ಮಾಡುತ್ತಿದ್ದ ಇತರ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನೂ ಹೇಳಿದ. ಪ್ರೌಢಶಾಲೆಯ ಅನೇಕ ವಿದ್ಯಾರ್ಥಿಗಳ ಹೆಸರೂ ಅದರಲ್ಲಿ ಸೇರಿತ್ತು. ಅದನ್ನು ನೋಡಿ ನನಗೆ ತುಂಬಾ ಆಶ್ಚರ್ಯವುಂಟಾಯಿತು. ಜತೆಗೆ ದುಃಖವೂ ಆಯಿತು. ಇದರ ಕಾರಣವನ್ನು ವಿಚರಿಸಿದೆನು. ‘ನಾವು ಮಾಂಸ ಸೇವಿಸುವುದಿಲ್ಲ. ಅದರಿಂದ ದುರ್ಬಲರಾಗಿದ್ದೇವೆ. ಆಂಗ್ಲೇಯರು ನಮ್ಮ ಮೇಲೆ ಅಧಿಕಾರ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರು ಮಾಂಸಾಹಾರಿಗಳಾದುದೇ. ನಾನು ಎಷ್ಟು ಗಟ್ಟಿಮುಟ್ಟಾಗಿದ್ದೇನೆ, ಹೇಗೆ ಓಡುತ್ತೇನೆ. ನಿನಗೆ ಗೊತ್ತೆ? ಇದಕ್ಕೆ ಕಾರಣ ನಾನು ಮಾಂಸಾಹಾರಿಯಾಗಿರುವುದೇ. ಮಾಂಸಾಹಾರಿಗೆ ಕುರು, ಹುಣ್ಣು, ಬಾವು ಆಗುವುದಿಲ್ಲ. ಆದರೂ ಬೇಗ ವಾಸಿಯಾಗುತ್ತದೆ.

ನೋಡು, ನಮ್ಮ ಉಪಾಧ್ಯಾಯರೂ ಮಾಂಸವನ್ನು ಸೇವಿಸುತ್ತಾರೆ. ಇನ್ನೂ ಎಷ್ಟೋ ಮಂದಿ ದೊಡ್ಡ ದೊಡ್ಡ ಮನುಷ್ಯರು ಸೇವಿಸುತ್ತಾರೆ. ಸರಿಯಾಗಿ ಯೋಚನೆ ಮಾಡದೆ ಹೀಗೆ ಮಾಡಲು ಅವರೇನು ಮೂರ್ಖರೇ. ನೀನೂ ಮಾಂಸವನ್ನು ತಿನ್ನಬೇಕು. ಒಮ್ಮೆ ತಿಂದು ನಿನ್ನ ದೇಹಕ್ಕೆ ಎಷ್ಟು ಬಲ ಬರುತ್ತದೆ ನೋಡು’ ಎಂದನು. ಈ ಬೋಧನೆಯೆಲ್ಲ ಒಂದೇ ದಿನ ಮಾಡಿದುದಲ್ಲ. ಅನೇಕ ಉದಾಹರಣೆಗಳೊಡನೆ ಎಷ್ಟೋ ಬಾರಿ ಹೇಳಿದುದರ ಸಾರಾಂಶವಿದು. ನಮ್ಮ ಅಣ್ಣ, ಆಗಲೇ ಜಾರಿ ಬಿದ್ದಿದ್ದುದರಿಂದ ಈ ವಾದವನ್ನು ಅವನೂ ಸಮರ್ಥಿಸಿದನು. ಈ ಸ್ನೇಹಿತ ಮತ್ತು ನಮ್ಮ ಅಣ್ಣ, ಇವರೊಂದಿಗೆ ಹೋಲಿಸಿ ನೋಡಿದರೆ ನಾನು ಬಡ ಆಳು ಮತ್ತು ದುರ್ಬಲನಾಗಿದ್ದುದು ನಿಜ. ಅವರ ದೇಹ ಕಟ್ಟುಮಸ್ತಾಗಿತ್ತು. ಅವರಿಗೆ ಶಕ್ತಿಯೂ ಹೆಚ್ಚಾಗಿತ್ತು. ಅವರು ನಿರ್ಭೀತರೂ ಹೌದು. ಆ ಸ್ನೇಹಿತನ ಪರಾಕ್ರಮ ನನ್ನನ್ನು ಮುಗ್ಧನನ್ನಾಗಿ ಮಾಡಿತ್ತು. ಆತ ಬಹುದೂರ ಓಡುತ್ತಿದ್ದ. ವೇಗವೂ ಹೆಚ್ಚಾಗಿತ್ತು. ದೂರಕ್ಕೆ ಹಾರುತ್ತಿದ್ದ, ಎತ್ತರಕ್ಕೆ ನೆಗೆಯುತ್ತಿದ್ದನು. ಎಷ್ಟು ಪೆಟ್ಟು ಬಿದ್ದರೂ ಸಹಿಸಿಕೊಳ್ಳುತ್ತಿದ್ದನು. ಈ ಶಕ್ತಿಗಳನ್ನೆಲ್ಲ ಅವನು ಆಗಾಗ ನನ್ನ ಮುಂದೆ ಪ್ರದರ್ಶಿಸುತ್ತಿದ್ದ. ತನ್ನಲ್ಲಿಲ್ಲದ ಸಾಮರ್ಥ್ಯವನ್ನು ಇತರರಲ್ಲಿ ನೋಡಿದೆರೆ ಮನುಷ್ಯ ಆಶ್ಚರ್ಯ ಗೊಳ್ಳುತ್ತಾನೆ. ನನಗೂ ಹಾಗೆಯೇ ಆಯಿತು. ಆಶ್ಚರ್ಯದಿಂದ ಮೋಹ ಹುಟ್ಟಿತು. ನನಗೆ ಓಡುವುದಕ್ಕಾಗಲೀ, ಹಾರುವುದಕ್ಕಾಗಲೀ ಶಕ್ತಿ ಇರಲಿಲ್ಲ. ನಾನೂ ಈ ಮಿತ್ರನಂತೆ ಏಕೆ ಬಲಶಾಲಿಯಾಗಬಾರದು ಎಂದು ಮನಸ್ಸಿನೊಳಗೇ ಅಂದುಕೊಂಡೆ.

ಇದಲ್ಲದೆ ನಾನು ಬಹಳ ಅಂಜುಬುರುಕನಾಗಿದ್ದೆ. ಕಳ್ಳರು, ಭೂತ, ಹಾವು ಎಂದರೆ ನನಗೆ ಯಾವಾಗಲೂ ಭಯ. ರಾತ್ರಿ ಹೊತ್ತು ಒಬ್ಬನೇ ಹೊರಗೆ ಹೊರಡಲು ನನಗೆ ಧೈರ್ಯವಿರುತ್ತಿರಲಿಲ್ಲ. ಕತ್ತಲೆಯನ್ನು ಕಂಡರೇ ಮೈ ನಡುಕ. ದೀಪವಿಲ್ಲದೆ ಮಲಗುವುದು, ಪ್ರಾಯಶಃ ಸಾಧ್ಯವೇ ಇರಲಿಲ್ಲ. ಯಾವ ಕಡೆಯಿಂದ ಭೂತ, ಯಾವ ಕಡೆಯಿಂದ ಕಳ್ಳರು, ಯಾವ ಕಡೆಯಿಂದ ಹಾವುಗಳು ಬರುವುವೋ ಎಂದು ಭಯ. ಆದುದರಿಂದ ದೀಪವಿಲ್ಲದೆ ಮಲಗಲು ಸಾಧ್ಯವಿರಲಿಲ್ಲ. ಮಗ್ಗುಲಲ್ಲಿ ನಿದ್ರಿಸುತ್ತಿರುವ ಆಗ ತಾನೆ ತಾರುಣ್ಯವನ್ನು ಹೊಂದುತ್ತಿರುವ ನನ್ನ ಹೆಂಡತಿಗೆ ಈ ನನ್ನ ಭಯವನ್ನು ಹೇಳುವುದೆಂತು? ಸಂಕೋಚವಾಗುತ್ತಿತ್ತು. ಏಕೆಂದರೆ ಆಕೆ ನನಗಿಂತ ಹೆಚ್ಚು ಧೈರ್ಯಶಾಲಿಯೆಂದು ನನಗೆ ಗೊತ್ತಿತ್ತು. ಅದರಿಂದ ನನ್ನ ನಾಚಿಕೆ ಇನ್ನೂ ಅಧಿಕವಾಯಿತು. ಆಕೆಗೆ ಹಾವುಗಳ ಅಥವಾ ಪಿಶಾಚಿಗಳ ಅಂಜಿಕೆ ಇರಲಿಲ್ಲ. ಕತ್ತಲಲ್ಲಿ ಒಂಟಿಯಾಗಿ ಬೇಕಾದಲ್ಲಿಗೆ ಹೋಗುತ್ತಿದ್ದಳು. ನನ್ನ ಈ ದೌರ್ಬಲ್ಯಗಳೆಲ್ಲ ನನ್ನ ಮಿತ್ರನಿಗೆ ಗೊತ್ತಿತ್ತು. ಅವನು ‘ಬದುಕಿರುವ ಹಾವುಗಳನ್ನು ಕೈಯಲ್ಲಿ ಹಿಡಿದುಕೊಳ್ಳುತ್ತೇನೆ. ಕಳ್ಳರಿಗೆ ಹೆದರುವುದಿಲ್ಲ, ಭೂತ ಪಿಶಾಚಿಗಳೆನ್ನುವುವು ಇಲ್ಲವೇ ಇಲ್ಲ’ ಎನ್ನುತ್ತಿದ್ದ. ಇದೆಲ್ಲ ಮಾಂಸಾಹಾರದ ಪ್ರತಾಪವೆಂದು ಅವನು ಹೇಳುತ್ತಿದ್ದ. ಈ ಎಲ್ಲ ಮಾತುಗಳೂ ನನ್ನ ಮನಸ್ಸಿನಲ್ಲಿ ನಾಟಿದವು. ನಾನು ಮಾಂಸವನ್ನು ಸೇವಿಸಲು ಒಪ್ಪಿದೆ. ಇದರಿಂದ ಬಲಶಾಲಿಯೂ ಭಯರಹಿತನೂ ಆಗುತ್ತೇನೆ. ದೇಶವೆಲ್ಲ ಮಾಂಸ ತಿನ್ನಲು ಪ್ರಾರಂಭಿಸಿದರೆ ಆಂಗ್ಲೇಯರನ್ನು ಓಡಿಸಬಹುದು ಎಂದು ನನಗೆ ಭಾಸವಾಯಿತು. ಮಾಂಸಾಹಾರ ಪ್ರಯೋಗಕ್ಕೆ ಒಂದು ದಿನ ಗೊತ್ತಾಯಿತು. ಈ ಪ್ರಯೋಗ ಯಾರಿಗೂ ತಿಳಿಯದಂತೆ ನಡೆಯಬೇಕಾಗಿತ್ತು.

ಇದರ ಜತೆಗೆ ತಾಯಿ ತಂದೆಯರಲ್ಲಿ ನನ್ನ ಭಕ್ತಿ ವಿಶೇಷವಾಗಿತ್ತು. ನಾನು ಮಾಂಸಾಹಾರದ ದಾರಿ ಹಿಡಿದುದು ಅವರಿಗೆ ಗೊತ್ತಾದರೆ, ಅವರಿಗೆ ಪ್ರಾಣ ಹೋದಂತೆ ಆಗುತ್ತಿದ್ದಿತು. ಇಂತಹ ಪ್ರಸಂಗದಲ್ಲಿ ನಾನು ಮಾಂಸವನ್ನು ತಿನ್ನಲು ನಿಶ್ಚಯ ಮಾಡಿದುದು, ನನ್ನ ಮಟ್ಟಿಗೆ ಹೇಳುವುದಾದಕ್ಕೆ ಬಹಳ ಗಂಭೀರವೂ ಭಯಂಕರವೂ ಆದ ಸಂಗತಿಯಾಗಿತು. ಆದರೆ ನಾನು ‘ಸುಧಾರಣೆಯ’ ಕಡೆಗೆ ಪೂರ್ಣವಾಗಿ ಒಲಿವಿದ್ದೆನು. ಮಾಂಸಾಹಾರ ಬಹಳ ರುಚಿ ಎಂಬ ಅಭಿಪ್ರಾಯದಿಂದ ನಾನು ಅದನ್ನು ತಿನ್ನಲು ಬಯಸಲಿಲ್ಲ. ರುಚಿ ನನ್ನನ್ನು ಆಕರ್ಷಿಸಲಿಲ್ಲ. ‘ನಾನು ಬಲಶಾಲಿಯಾಗಬೇಕು, ಸಾಹಸಿಯಾಗಬೇಕು. ನಮ್ಮ ದೇಶದ ಇತರರೂ ಹಾಗೆಯೇ ಆಗಲು ಪ್ರೇರಿಸಬೇಕು. ಆಂಗ್ಲೇಯರನ್ನು ಸೋಲಿಸಿ ಭಾರತವನ್ನು ಸ್ವತಂತ್ರವಾಗಿ ಮಾಡಬೇಕು’ ಎಂಬುದು ನನ್ನ ಆಸೆಯಾಗಿತ್ತು. ಈ ಸುಧಾರಣೆಯ ಹೆಸರಿನಲ್ಲಿ ನಾನು ಎಚ್ಚರ ತಪ್ಪಿದೆನೆಂದೇ ಹೇಳಬೇಕು.

Tags:
error: Content is protected !!