Mysore
25
broken clouds
Light
Dark

ರಾಜಭವನ ಚಲೋಗೆ ಕರೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ವಿರುದ್ಧ ಮತ್ತೆ ಹೋರಾಟ ಮಾಡಲು ಕಾಂಗ್ರೆಸ್‌ ಮುಂದಾಗಿದೆ.

ಮೈಸೂರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಪರಿಣಾಮ ದಿನದಿಂದ ದಿನಕ್ಕೆ ಕಾಂಗ್ರೆಸ್‌ ನಾಯಕರ ಪ್ರತಿಭಟನೆ ಜೋರಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ರಾಜ್ಯಪಾಲರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದು, ಆಗಸ್ಟ್.‌31ರಂದು ರಾಜಭವನ ಚಲೋಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕರೆ ನೀಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಡಿ.ಕೆ.ಶಿವಕುಮಾರ್‌ ಅವರು, ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ಹೋಗಿ ಯಾವ ಯಾವ ಪೆಂಡಿಂಗ್‌ ಪ್ರಾಸಿಕ್ಯೂಷನ್‌ ಇದೆ ಅದನ್ನು ಜಾರಿಗೆ ತರುವಂತೆ ಮನವಿ ಸಲ್ಲಿಸುತ್ತೇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಸಕರು, ಸಚಿವರು, ಪರಿಷತ್‌ ಸದಸ್ಯರು ಭಾಗಿಯಾಗಬೇಕು ಎಂದು ಸೂಚನೆ ನೀಡಿದರು.

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಇಲ್ಲಿಯವರೆಗೂ ಪೆಂಡಿಂಗ್‌ ಇರುವ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲೇಬೇಕು. ಅಲ್ಲಿಯವರೆಗೂ ನಾವು ಹೋರಾಟ ಕೈಬಿಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗಸ್ಟ್.‌31ರಂದು ನಡೆಯಲಿರುವ ರಾಜಭವನ ಚಲೋಗೆ ಎಲ್ಲರೂ ಭಾಗಿಯಾಗಲೇಬೇಕು ಎಂದು ಕಟ್ಟಾಜ್ಞೆ ಹೊರಡಿಸಿದರು.