Mysore
33
scattered clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಕಾಂಗ್ರೆಸ್ ಸರ್ಕಾರದಿಂದ 3ನೇ ಬಾರಿ ಹಾಲಿನ ದರ ಏರಿಕೆ: ಆರ್‌.ಅಶೋಕ್‌ ಕಿಡಿ

ಬೆಂಗಳೂರು: ರಾಜ್ಯ ಸರ್ಕಾರದಿಂದ ಸತತ 3ನೇ ಬಾರಿಗೆ ಹಾಲಿನ ದರ ಏರಿಕೆ ಮಾಡಲಾಗಿದೆ. ಸರ್ಕಾರಕ್ಕೆ ನಿಜವಾಗಿಯೂ ಬಡವರು, ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ. ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಮೇಲೆ ಹಾಲಿನ ದರವನ್ನು ಮೊದಲ ಬಾರಿ 2023ರ ಆಗಸ್ಟ್‌ನಲ್ಲಿ 3 ರೂ, ಎರಡನೇ ಬಾರಿ 2024ರ ಜೂನ್‌ನಲ್ಲಿ 2 ರೂ. ಹಾಗೂ ಮೂರನೇ ಬಾರಿಗೆ 2025ರ ಮಾರ್ಚ್‌ನಲ್ಲಿ 4 ರೂ.ಗಳನ್ನು 20 ತಿಂಗಳಲ್ಲಿ ಒಟ್ಟು 9 ರೂ. ಏರಿಕೆ ಮಾಡಿದೆ ಎಂದು ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, ತಾವು ಅಧಿಕಾರಕ್ಕೆ ಬಂದ ಮೇಲೆ ಕೇವಲ 20 ತಿಂಗಳಿನಲ್ಲಿ ಹಾಲಿನ ದರವನ್ನ ಮೂರು ಬಾರಿ ಒಟ್ಟು 9 ರೂಪಾಯಿ ಹೆಚ್ಚಿಸಿದ್ದೀರಿ. 2023ರ ಆಗಸ್ಟ್‌ನಲ್ಲಿ 3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ 2024 ಜೂನ್‌ನಲ್ಲಿ 2 ರೂಪಾಯಿ ಏರಿಕೆ ಆಯ್ತು. ಈಗ ಮತ್ತೊಮ್ಮೆ ಏಕಾಏಕಿ 4 ರೂಪಾಯಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಬಡವರು, ಮಾಧ್ಯಮ ವರ್ಗದ ಜನ ಈಗಾಗಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಗಗನಕ್ಕೇರಿರುವ ದಿನಬಳಕೆ ವಸ್ತುಗಳ ಬೆಲೆಯಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮ್ಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನಿಮಗೆ ಬಡವರು, ಮಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ. ಒಂದು ವೇಳೆ ಗ್ರಾಹಕರ ಮೇಲೆ ಹೊರೆ ಹೊರಿಸುವುದು ಅನಿವಾರ್ಯವಾದರೆ, ಹೆಚ್ಚಳ ಮಾಡಿರುವ 4 ರೂಪಾಯಿ ನೇರವಾಗಿ ಹಾಲು ಉತ್ಪಾದಕರ ಕೈಸೇರುವಂತೆ ನೋಡಿಕೊಳ್ಳಿ. ಆಡಳಿತ ವೆಚ್ಚ, ಮತ್ತೊಂದು ವೆಚ್ಚ ಎಂದು ಅತ್ತ ರೈತರಿಗೂ ಲಾಭವಿಲ್ಲದೆ ಇತ್ತ ಗ್ರಾಹಕರ ಜೇಬಿಗೂ ಕತ್ತರಿ ಹಾಕಿದರೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ, ಎಚ್ಚರಿಕೆ ಎಂದು ತಿಳಿಸಿದ್ದಾರೆ.

Tags: