Mysore
22
overcast clouds
Light
Dark

“ಆಂದೋಲನ ದಿನಪತ್ರಿಕೆ” ವರದಿ ಉಲ್ಲೇಖಿಸಿ ಸರ್ಕಾರಕ್ಕೆ ತಿವಿದ ವಿಪಕ್ಷ ನಾಯಕ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ರೈತರು ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಿದ 3 ತಿಂಗಳಾದರೂ ಹಣ ಜಮೆಯಾಗದ ವಿಷಯದ ಬಗ್ಗೆ ವಿಸ್ತಾರವಾಗಿ ವರದಿ ಮಾಡಿದ್ದ “ಆಂದೋಲನ ದಿನಪತ್ರಿಕೆ” ಸುದ್ದಿಯೊಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಸರ್ಕಾರದ ನಡೆಗೆ ವಿಪಕ್ಷ ನಾಯಕ ಆರ್‌ ಅಶೋಕ್‌ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ರೈತರ ಫಸಲಿಗೆ ನ್ಯಾಯಯುತ ಬೆಲೆ ನೀಡುವ ಸಲುವಾಗಿ ಸರ್ಕಾರವು ಬೆಂಬಲ ಬೆಲೆಯಡಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಪ್ರತಿ ವರ್ಷ ರಾಗಿ ಖರೀದಿ ಮಾಡುತ್ತಿದೆ. ಸರ್ಕಾರದ ಉದ್ದೇಶ ನ್ಯಾಯಯುತವಾಗಿದೆ. ಆದರೆ ರೈತರಿಂದ ಖರೀದಿ ಮಾಡಿದ ಫಸಲಿಗೆ ಸಮಯಕ್ಕೆ ಸರಿಯಾಗಿ ಹಣ ನೀಡದೇ ಇದ್ದ ಕಾರಣ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಕುರಿತು ಆಂದೋಲನ ದಿನಪತ್ರಿಕೆ ವಿಶೇಷ ವರದಿ ನೀಡಿತ್ತು. ಇದನ್ನು ಉಲ್ಲೇಖಿಸಿ ಸರ್ಕಾರದ ವಿರುದ್ಧ ಟ್ವೀಟ್‌ ಮಾಡಿರುವ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಸಿಎಂ ಅವರು ತಮ್ಮ ತವರು ಜಿಲ್ಲೆಯ ರೈತರಿಗೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಟ್ವೀಟ್‌ನಲ್ಲೇನಿದೆ?: “ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ರೈತರಿಗೆ ಮೋಸ. ಮೈಸೂರು ಜಿಲ್ಲೆಯಾದ್ಯಂತ ರಾಗಿ ಮಾರಾಟ ಕೇಂದ್ರಗಳಲ್ಲಿ ರೈತರು ರಾಗಿ ಮಾರಾಟ ಮಾಡಿ 3 ತಿಂಗಳಾದರೂ ಇನ್ನೂ ಹಣ ಬಿಡುಗಡೆ ಮಾಡದೆ ಅನ್ನದಾತರ ಸತಾಯಿಸುತ್ತಿದೆ ಈ ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರ.

ಸಿಎಂ ಸಿದ್ದರಾಮಯ್ಯ ನವರೇ, ಇಂತಹ ಭೀಕರ ಬರಗಾಲದಲ್ಲಿ ತಮ್ಮ ತವರು ಜಿಲ್ಲೆ ಮೈಸೂರಿನಲ್ಲಿಯೇ ಸುಮಾರು 20,000 ರೈತರಿಗೆ ಸೇರಬೇಕಾದ 157 ಕೋಟಿ ರೂಪಾಯಿ ಹಣ ಬಾಕಿ ಉಳಿಸಿಕೊಂಡಿದ್ದೀರಲ್ಲ ರೈತರ ಮೇಲೆ ನಿಮಗೆ ಯಾಕಿಷ್ಟು ಅಸಡ್ಡೆ?” ಎಂದು ಬರೆದುಕೊಂಡಿದ್ದಾರೆ.