ಬೆಂಗಳೂರು: ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಎಷ್ಟೇ ಕಷ್ಟಗಳು ಎದುರಾಗುತ್ತಿದ್ದರೂ ಇದಕ್ಕೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮದು ಬಹು ಸಂಸ್ಕೃತಿಯಲ್ಲಿ ಏಕತೆಯ ರಾಷ್ಟ್ರ. ಬಸವಣ್ಣ ಅವರ ಅನುಭವ ಮಂಟಪದಲ್ಲೂ ಪ್ರಜಾಪ್ರಭುತ್ವಕ್ಕೆ ಒತ್ತು ನೀಡಲಾಗಿತ್ತು ಎಂದರು.
ಇತ್ತೀಚೆಗೆ ಮತಗಳ್ಳತನ ನಡೆಯುತ್ತಿದೆ. ನನ್ನ ಮತ ನನ್ನ ಹಕ್ಕಿಗಾಗಿ ಹೋರಾಟ ಮಾಡಬೇಕು ಎಂಬ ಪರಿಸ್ಥಿತಿ ಎದುರಾಗಿದೆ. ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಅನಿವಾರ್ಯವಾಗಿದೆ ಎಂದರು.
ಇದನ್ನು ಓದಿ: ಮೈಸೂರು: ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೈಕಲ್ ರ್ಯಾಲಿ
ಸಂವಿಧಾನದಲ್ಲಿ ಯಾವ ಜಾತಿ ಧರ್ಮಕ್ಕೂ ಮೇಲು-ಕೀಳು ಎಂಬ ತಾರತಮ್ಯ ಇಲ್ಲ. ಜಾತಿ, ಧರ್ಮ ಹಾಗೂ ಲಿಂಗ ಬೇಧವಿಲ್ಲದೇ ಎಲ್ಲರಿಗೂ ಪ್ರಜಾಪ್ರಭುತ್ವದಲ್ಲಿ ಸಮಾನ ಅವಕಾಶಗಳಿವೆ. ಸಾಮಾಜಿಕ ಅಸಮಾನತೆ ನಿವಾರಣೆಯಾಗಬೇಕು. ಪ್ರತಿಯೊಬ್ಬರಿಗೂ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ದೊರೆಯಬೇಕು. ಜಾತಿಬೇಧ ಮಾಡಬಾರದು. ಧರ್ಮ ಸಹಿಷ್ಣುತೆ ಇರಬೇಕೆಂದು ಹೇಳಿದರು.
ವಿರೋಧ ಪಕ್ಷಗಳಿಗೆ ರಾಜಕೀಯ ಮಾಡಲು ಬೇರೆ ವಿಷಯಗಳೇ ಇಲ್ಲ. ಧರ್ಮದ ಹೆಸರಿನಲ್ಲೇ ರಾಜಕೀಯ ಮಾಡುತ್ತಿದ್ದಾರೆ. ಬಾನು ಮುಷ್ತಾಕ್ ದಸರಾ ಉದ್ಘಾಟಿಸಬಾರದೆಂದು ವಿರೋಧ ವ್ಯಕ್ತಪಡಿಸಲಾಗಿದೆ. ನಾವು ಯಾವ ವ್ಯವಸ್ಥೆಯಲ್ಲಿದ್ದೇವೆ ಎಂದೇ ಅರ್ಥವಾಗುತ್ತಿಲ್ಲ. ಸಂವಿಧಾನ ಧರ್ಮ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ. ಸ್ವಾತಂತ್ರ್ಯ ಬಂದು ಇಷ್ಟೂ ವರ್ಷಗಳಾದರೂ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಮಾಜಿ ಸಂಸದನೊಬ್ಬ ಸಂವಿಧಾನ ಓದದೆ ಮೂರ್ಖನಂತೆ ನಡೆದುಕೊಳ್ಳುತ್ತಾನೆ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.





